ಮೈಸೂರು : ಬೆಳೆದ ಮೆಣಸಿನಕಾಯಿಗೆ ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ದಾನ ಮಾಡಿ ಉಳಿದ ಬೆಳೆಯನ್ನು ರೈತ ನಾಶ ಮಾಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಗೊರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪ್ರಗತಿಪರ ರೈತ ರಾಜಶೆಟ್ಟಿ ಮಗ ಹರೀಶ್ ಎಂಬುವರು ಆಧುನಿಕ ಬೇಸಾಯ ಪದ್ಧತಿ ಅಳವಡಿಸಿಕೊಂಡು ಮೆಣಸಿನಕಾಯಿ ಬೆಳೆ ಬೆಳೆದಿದ್ದರು. ಲಾಕ್ಡೌನ್ನಿಂದ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೆ ರೈತ ಹರೀಶ್ಗೆ ಎರಡು ಲಕ್ಷ ರೂ. ನಷ್ಟ ಉಂಟಾಗಿದೆ. ಲಾಕ್ಡೌನ್ ಸಮಯದಲ್ಲಿ ದಲ್ಲಾಳಿಗಳು ಬಂದು ಕೇವಲ 2 ರೂಪಾಯಿಗೆ 1 ಕೆಜಿ ಕೇಳಿದರಂತೆ. ಇದರಿಂದಾಗಿ ಏನು ಮಾಡಬೇಕೆಂದು ತೋಚದ ರೈತ, ತನ್ನೂರಿನ ಜನಕ್ಕೆ ಮೆಣಸಿನಕಾಯಿಯನ್ನು ದಾನ ಮಾಡಿದ್ದಲ್ಲದೆ, ಉಳಿದ ಬೆಳೆಯನ್ನು ಮನನೊಂದು ನಾಶ ಮಾಡಿದ್ದಾರೆ.
ಗೇರಹಳ್ಳಿ ಗ್ರಾಮದ ರೈತ ಹರೀಶ್ ಆಧುನಿಕ ಪದ್ಧತಿ ಅಳವಡಿಸಿಕೊಂಡು ಹಸುವಿನ ಕಾವಲು ಗ್ರಾಮದ ಜಮೀನನಲ್ಲಿ 2 ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೇಸಾಯ ಮಾಡಿದ್ದರು. ಆದರೆ, ಇದಕ್ಕೆ ಲಾಕ್ಡೌನ್ನಿಂದ ತಕ್ಕ ಬೆಲೆ ಸಿಗದೆ ಬೆಳೆದ ಬೆಳೆಯನ್ನು ತನ್ನೂರಿನ ಜನರಿಗೆ ದಾನ ಮಾಡಿದ್ದಲ್ಲದೆ ಇನ್ನೂ ಉಳಿದ ಮೆಣಸಿನಕಾಯಿಯನ್ನು ಏನು ಮಾಡಬೇಕೆಂದು ತೋಚದೆ ಹೊಲದಲ್ಲಿಯೇ ನಾಶಪಡಿಸಿದ್ದಾರೆ.
ಈ ಬಗ್ಗೆ ರೈತ ಹರೀಶ್ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸ್ಥಳೀಯ ಶಾಸಕರು ರೈತರ ಬೆಂಬಲಕ್ಕೆ ಬರಬೇಕು. ಇಲ್ಲದಿದ್ದರೆ ಇನ್ನಷ್ಟು ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ತಕ್ಷಣ ಸರ್ಕಾರ ರೈತರಿಗೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ರೈತರ ಕುಟುಂಬಗಳು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ. ಸರ್ಕಾರ ರೈತರ ಸಂಕಷ್ಟಕ್ಕೆ ಧಾವಿಸಬೇಕು ಹಾಗೂ ಪರಿಹಾರ ನೀಡಬೇಕೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.