ಮೈಸೂರು : ಮೈಸೂರು ಭಾಗದ ಇಬ್ಬರು ರಾಜಕಾರಣಿಗಳು ಚೈತ್ರಾ ಕುಂದಾಪುರ ಮೂಲಕ ಹಣ ಕೊಟ್ಟು ಟಿಕೆಟ್ ಪಡೆದಿದ್ದಾರೆ. ಈಕೆಗೆ ಮೈಸೂರು ಭಾಗದ ರಾಜಕಾರಣಿಗಳ ಲಿಂಕ್ ಇದೆ. ಯಾರ್ಯಾರ ಲಿಂಕ್ ಇದೆ ಎಂಬುದನ್ನು, ಶೀಘ್ರವೇ ಹೆಸರುಗಳನ್ನು ಬಹಿರಂಗಪಡಿಸಲಿದ್ದೇವೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ ಲಕ್ಷ್ಮಣ್ ಹೇಳಿಕೆ ನೀಡಿದ್ದಾರೆ.
ಇಂದು ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್, ವಂಚನೆ ಪ್ರಕರಣದಲ್ಲಿ ಬಂಧಿತರಾದ ಚೈತ್ರಾ ಕುಂದಾಪುರಗೆ ಮೈಸೂರು ಭಾಗದ ರಾಜಕಾರಣಿಗಳ ಲಿಂಕ್ ಇದೆ. ಈ ಭಾಗದ ಇಬ್ಬರು ರಾಜಕಾರಣಿಗಳು ಈಕೆಯ ಮೂಲಕ ಹಣ ನೀಡಿ ಟಿಕೆಟ್ ಪಡೆದುಕೊಂಡಿದ್ದಾರೆ. ಆ ಇಬ್ಬರು ಮೈಸೂರಿನ ಗ್ರಾಮಾಂತರ ಭಾಗದವರು. ಶೀಘ್ರದಲ್ಲೇ ಎಲ್ಲರ ಹೆಸರನ್ನು ಬಹಿರಂಗಪಡಿಸುತ್ತೇವೆ ಎಂದರು.
ಪಿಎಸ್ಐ ಹಗರಣಕ್ಕೂ ಚೈತ್ರಾ ಅವರಿಗೂ ಸಂಬಂಧವಿದೆಯಾ? ಎಂಬ ಬಗ್ಗೆ ತನಿಖೆಯಾಗಬೇಕು. ಚೈತ್ರಾ ಕುಂದಾಪುರ ಅವರು ವಂಚನೆ ಆರೋಪದ ಮೇಲೆ ಬಂಧನವಾಗಿದ್ದಾರೆ. ಇದರ ಜೊತೆಗೆ ಚೈತ್ರಾ ಅವರು ಪಿಎಸ್ಐ ಸೇರಿದಂತೆ ನಾಲ್ಕಕ್ಕೂ ಹೆಚ್ಚಿನ ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇದೆ ಎಂದು ಹೇಳಿದರು. ಸಿ ಟಿ ರವಿ ಮತ್ತು ಯಡಿಯೂರಪ್ಪ ಅವರ ಜೊತೆ ಈಕೆಯ ಸಂಬಂಧವೇನು? ಎಂಬ ಬಗ್ಗೆ ಬಹಿರಂಗಪಡಿಸಬೇಕು. ಚೈತ್ರಾ ಕುಂದಾಪುರಗೆ ಜೈಲಿನಲ್ಲಿರುವ ಕೆಲವರ ಸಂಪರ್ಕ ಇದೆ. ಈ ಬಗ್ಗೆ ನಮ್ಮ ಸರ್ಕಾರದಿಂದ ಪ್ರಾಮಾಣಿಕ ತನಿಖೆ ಮಾಡಿಸುತ್ತೇವೆ ಎಂದು ಹೇಳಿದರು.
ಸುಮಾರು 40 ಜನರು ಈ ಟಿಕೆಟ್ ಪಡೆಯುವ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. 185 ಕೋಟಿ ವ್ಯವಹಾರ ಇಲ್ಲಿ ನಡೆದಿದೆ. ಒಟ್ಟು 17ಕ್ಕೂ ಹೆಚ್ಚು ಜನರು ಮೋಸ ಹೋಗಿದ್ದಾರೆ. 23 ಜನಕ್ಕೆ ಟಿಕೆಟ್ ಕೊಡಿಸಿ ಅವರಿಂದ ಹಣ ಪಡೆದಿದ್ದಾರೆ. ಚೈತ್ರಾ ಕುಂದಾಪುರ ಅವರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ ಅವರ ಜೊತೆಗೆ ನೇರ ಸಂಪರ್ಕ ಹೊಂದಿದ್ದಾರೆ. ಸುಮಾರು 9 ಜನರ ತಂಡದಿಂದ ಈ ಕೃತ್ಯ ನಡೆದಿದೆ. ಇವರೆಲ್ಲರೂ ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರು. ಇವರ ಯೋಗ್ಯತೆ ಏನು ಎನ್ನುವುದನ್ನು ಬಹಿರಂಗಪಡಿಸಬೇಕು ಎಂದರು.
ಮಹಿಳಾ ಮೀಸಲಾತಿ ಹಿಂದೆ ಸೋನಿಯಾ ಗಾಂಧಿಯವರ ಶ್ರಮವಿದೆ: ಕೇಂದ್ರ ಹಾಗೂ ರಾಜ್ಯ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇಕಡಾ 33% ಮೀಸಲಾತಿ ಜಾರಿಗೆ ತಂದಿರುವುದರ ಹಿಂದೆ, ಈ ಮೀಸಲಾತಿ ಜಾರಿಗೆ ಬರಲು ಇದರ ಹಿಂದೆ ಸೋನಿಯಾ ಗಾಂಧಿಯವರ ಶ್ರಮವಿದೆ. ಈ ಬಗ್ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರು ಇದಕ್ಕಾಗಿ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಈ ಹಿಂದೆಯೇ ಕೇಂದ್ರದಲ್ಲಿ ಒಕ್ಕೂಟ ಸರ್ಕಾರ ಇದ್ದಾಗ ಈ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಆದರೆ ಮೈತ್ರಿ ಒಕ್ಕೂಟದಲ್ಲಿ ಸ್ವಲ್ಪ ತಡವಾಯಿತು. ಹೈದರಾಬಾದ್ನಲ್ಲಿ ಇಂಡಿಯಾ ಒಕ್ಕೂಟ ಸಭೆ ನಡೆದಿದ್ದರಿಂದ ಬಿಜೆಪಿಗರು ವಿಚಲಿತರಾಗಿದ್ದಾರೆ. ಮಹಿಳಾ ಮೀಸಲಾತಿ 33% ನಲ್ಲಿಯೂ ಇಂಟರ್ನಲ್ ಕೋಟಾ ಕೊಡಬೇಕು ಎಂದು ಎಂ. ಲಕ್ಷ್ಮಣ್ ಈ ಮೂಲಕ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದರು.
ನಮ್ಮ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟಿಲ್ಲ : ರಾಜ್ಯದ ಜಲಾಶಯಗಳಲ್ಲಿ ಸುಮಾರು 42 ಟಿಎಂಸಿ ನೀರು ಇದೆ. ಇದರಲ್ಲಿ ಬೆಂಗಳೂರಿನ ಕುಡಿಯುವ ನೀರಿಗೆ 24 ಟಿಎಂಸಿ ನೀರು ಬೇಕು. 25 ಟಿಎಂಸಿ ಮೈಸೂರಿಗೆ ಬೇಕು. 2024 ರವರೆಗೆ ಇಷ್ಟು ಕುಡಿಯಲು ನೀರು ಬೇಕಾಗಿದೆ. ನಾವು ತಮಿಳುನಾಡಿಗೆ ನೀರು ಬಿಟ್ಟಿಲ್ಲ. ನಾವು ನೀರು ಬಿಟ್ಟಿರುವುದು ಗದ್ದೆಗಳಿಗೆ. ಸೆ. 8 ರಂದೇ ತಮಿಳುನಾಡಿಗೆ ನೀರು ಹರಿಸುವುದನ್ನು ಬಂದ್ ಮಾಡಲಾಗಿದೆ. ಈಗ ನೀರು ಬಿಟ್ಟಿರುವುದು ಕೇವಲ ಕಾಲುವೆಗಳಿಗೆ ಮಾತ್ರ ಎಂದು ಪತ್ರಕರ್ತರ ಪ್ರಶ್ನೆಗೆ ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಉತ್ತರಿಸಿದರು.
ಬಿಜೆಪಿಯಲ್ಲಿ ಮೋದಿ ಬಿಟ್ಟು ಪ್ರಧಾನಿಯಾಗಲು ಯಾರು ಗಂಡಸರಿಲ್ಲವೇ ? : ಯಡಿಯೂರಪ್ಪ, ಈಶ್ವರಪ್ಪ, ಗೋವಿಂದ ಕಾರಜೋಳ ನೇತೃತ್ವದ ರಾಜಕೀಯ ನಿವೃತ್ತಿ ಹೊಂದಿರುವ ಕಮಿಟಿ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ ಎಂದು ವ್ಯಂಗ್ಯವಾಡಿದ ಲಕ್ಷ್ಮಣ್, ಇವರು ಡಿ ಕೆ ಶಿವಕುಮಾರ್ ಅವರ ವಿರುದ್ಧ ರಣಕಹಳೆ ಎನ್ನುತ್ತಿದ್ದಾರೆ. ಇದರಲ್ಲಿ ಇರುವವರೆಲ್ಲರೂ ಕಳಂಕಿತರೇ. ಯಡಿಯೂರಪ್ಪ ಅವರು ಚೆಕ್ ಮೂಲಕ ಹಣ ಪಡೆದವರು, ಈಶ್ವರಪ್ಪ ಅವರ ಮೇಲೆ ಗುತ್ತಿಗೆದಾರರಿಂದ ಹಣ ಪಡೆದ ಆರೋಪ ಇದೆ. ಹೀಗೆ ಅಲ್ಲಿರುವವರೆಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇವೆ. ಬಿಜೆಪಿಯಲ್ಲಿ ಮೋದಿ ಬಿಟ್ಟು ಪ್ರಧಾನಿ ಆಗಲು ಬೇರೆಯವರು ಇಲ್ಲವೇ?. ಯಡಿಯೂರಪ್ಪ ಅವರು ಮೋದಿಗಿಂತ ಸೀನಿಯರ್, ನೀವು ಮೋದಿಯವರನ್ನು ಪ್ರಧಾನಿ ಮಾಡಲು ಹೊರಟಿದ್ದೀರಿ. ಆದ್ರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಕೂಟ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಎಂ ಲಕ್ಷ್ಮಣ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಚೈತ್ರಾ ಕುಂದಾಪುರಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ: ಆರಗ ಜ್ಞಾನೇಂದ್ರ