ಮೈಸೂರು : ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಮೂರು ಪಕ್ಷಗಳು ಗೆಲ್ಲಲು ಅಬ್ಬರದ ಪ್ರಚಾರ ಹಾಗೂ ಮತದಾರರನ್ನ ಓಲೈಕೆ ಮಾಡಲು ಹಲವಾರು ಪ್ರಯತ್ನಗಳನ್ನ ನಡೆಸಿವೆ. ಈ ನಡುವೆ ಮೂರು ಪಕ್ಷದ ರಾಜ್ಯಮಟ್ಟದ ನಾಯಕರುಗಳು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ದಕ್ಷಿಣ ಪದವೀಧರ ಕ್ಷೇತ್ರ ರಂಗೇರಿದೆ.
ಜೂನ್ 13ರಂದು ನಡೆಯಲಿರುವ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಯನ್ನೊಳಗೊಂಡ ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮೂರು ಪಕ್ಷದ ಪ್ರಮುಖ ರಾಜ್ಯಮಟ್ಟದ ನಾಯಕರುಗಳು ಪ್ರಚಾರ ಆರಂಭಿಸಿದ್ದಾರೆ. ಚುನಾವಣಾ ಕಣ ರಂಗೇರಿದೆ.
ಚುನಾವಣಾ ಕಣದಲ್ಲಿ ಪ್ರಮುಖವಾಗಿ ಬಿಜೆಪಿಯಿಂದ ಮೈ. ವಿ ರವಿಶಂಕರ್, ಕಾಂಗ್ರೆಸ್ನಿಂದ ಮಧು ಮಾದೇಗೌಡ, ಜೆಡಿಎಸ್ನಿಂದ ಹೆಚ್ ಕೆ ರಾಮು, ರೈತ ಸಂಘಗಳ ಒಕ್ಕೂಟದಿಂದ ಪ್ರಸನ್ನ ಎನ್. ಗೌಡ ಸ್ಪರ್ಧೆ ಮಾಡಿದ್ದು, ಪ್ರಮುಖವಾಗಿ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಪ್ರಚಾರದಲ್ಲಿ ಘಟಾನುಘಟಿ ನಾಯಕರು.. ಕಳೆದ ಬಾರಿ ಅಲ್ಪ ಮತಗಳಿಂದ ಸೋತಿದ್ದ ಬಿಜೆಪಿ ಅಭ್ಯರ್ಥಿ ಮೈ. ವಿ ರವಿಶಂಕರ್ ಪರ ಈಗಾಗಲೇ ಬಿಜೆಪಿಯ ಪ್ರಮುಖ ನಾಯಕರುಗಳು ಪ್ರಚಾರ ಕೈಗೊಂಡಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಟಿ ಸೋಮಶೇಖರ್ ಕಳೆದ 15 ದಿನಗಳಿಂದಲೂ ಗ್ರಾಮಾಂತರ ಪ್ರದೇಶದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈ ಮಧ್ಯೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸೇರಿದಂತೆ ಪ್ರಮುಖ ಸಚಿವರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದು, ಇದೇ ತಿಂಗಳ 8ನೇ ತಾರೀಖಿನಂದು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಮಂಡ್ಯ ಜಿಲ್ಲೆಯವರಾಗಿದ್ದು, ಅವರ ತಂದೆ ದಿವಂಗತ ಡಿ. ಮಾದೇಗೌಡ ಅವರ ನಾಮಬಲ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರುಗಳ ಪ್ರಚಾರದಿಂದ ಗೆಲುವಿನ ನಿರೀಕ್ಷೆಯಲ್ಲಿದ್ದು, ಇಂದಿನಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೈಸೂರಿನಿಂದ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಆರಂಭಿಸಿದ್ದಾರೆ. ಇವರಿಗೆ ಆರ್ ಧ್ರುವನಾರಾಯಣ್, ಮಾಜಿ ಸಚಿವ ಹೆಚ್ ಸಿ ಮಹಾದೇವಪ್ಪ ಸಾಥ್ ನೀಡಲಿದ್ದಾರೆ.
ಜೆಡಿಎಸ್ನಿಂದ ಸ್ಪರ್ಧೆ ಮಾಡಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಹೆಚ್ ಕೆ ರಾಮು ಕಣದಲ್ಲಿದ್ದು, ಈಗಾಗಲೇ ಸ್ಥಳೀಯ ಮುಖಂಡರ ಸಹಾಯದಿಂದ ಪ್ರಚಾರ ಕೈಗೊಂಡಿದ್ದಾರೆ. ಇಂದಿನಿಂದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಇಂದು ಮೈಸೂರು ನಗರದ ವಿವಿಧ ಕಾಲೇಜುಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಆ ನಂತರ ನಾಳೆಯೂ ಸಹ ಪತ್ರಿಕಾಗೋಷ್ಠಿ ನಡೆಸಲಿದ್ದು, ಪ್ರಚಾರ ಸಹ ಮಾಡಲಿದ್ದಾರೆ.
ಈವರೆಗೆ ಕಾಂಗ್ರೆಸ್ ಗೆದ್ದಿಲ್ಲ.. ದಕ್ಷಿಣ ಪದವೀಧರ ಕ್ಷೇತ್ರದ ಇತಿಹಾಸವನ್ನ ಗಮನಿಸಿದರೆ 1965ರಿಂದ ನಡೆದ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿಲ್ಲ. 1968 ಮತ್ತು1974ರಲ್ಲಿ ಜನಸಂಘದ ಅಭ್ಯರ್ಥಿಯಾಗಿ ಎ. ಕೆ ಸುಬ್ಬಯ್ಯ ಗೆದ್ದಿದ್ದರು. 1980ರಲ್ಲಿ ಬಿಜೆಪಿಯಿಂದ ಪುನಃ ಎ.ಕೆ ಸುಬ್ಬಯ್ಯ ಸ್ಪರ್ಧೆ ಮಾಡಿ ಗೆದ್ದಿದ್ದರು. 1986ರಲ್ಲಿ ಜನತಾ ಪಕ್ಷದಿಂದ ಸತ್ಯನಾರಾಯಣ ರಾವ್, 1992ರಲ್ಲಿ ಕೃಷ್ಣಮೂರ್ತಿ ಬಿಜೆಪಿ ಪಕ್ಷದಿಂದ ಗೆದ್ದಿದ್ದರು.
ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ 1997ರಲ್ಲಿ ಗೋ ಮಧುಸೂದನ್ ಸ್ಪರ್ಧಿಸಿದ್ದರು. ಪುನಃ 1998ರಲ್ಲಿ ಸ್ಫರ್ಧಿಸಿ ಗೆಲುವು ಸಾಧಿಸಿದ್ದರು. ಆನಂತರ 2004ರಲ್ಲಿ ಜೆಡಿಎಸ್ನ ಕೆ ಟಿ ಶ್ರೀಕಂಠೇಗೌಡ ಗೆಲುವು ಸಾಧಿಸಿದ್ದರು. ಪುನಃ 2010ರಲ್ಲಿ ಗೋ ಮಧುಸೂದನ್ ಗೆಲುವು ಸಾಧಿಸಿದ್ದರೆ, ಆ ಬಳಿಕ 2016ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ನ ಶ್ರೀಕಂಠೇಗೌಡ ಮತ್ತೆ ಗೆಲುವು ಸಾಧಿಸಿದ್ದರು. ಈ ಫಲಿತಾಂಶದ ಇತಿಹಾಸವನ್ನ ಗಮನಿಸಿದರೆ, ಕಾಂಗ್ರೆಸ್ ಒಂದು ಬಾರಿಯೂ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಗೆಲುವು ಸಾಧಿಸಿಲ್ಲ.
ಹೀಗಾಗಿ, ಈ ಬಾರಿ ಗೆಲುವನ್ನ ಸಾಧಿಸಬೇಕೆಂದು ಕಾಂಗ್ರೆಸ್ ಪ್ರಯತ್ನ ನಡೆಸಿದೆ. ಈ ಬಾರಿ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಯಾರೇ ಗೆದ್ದರೂ ಸಹ ಹೊಸ ಮುಖ ಗೆಲುವು ಸಾಧಿಸಲಿದ್ದು, ಅದೊಂದು ಹೊಸ ದಾಖಲೆಯಾಗಲಿದೆ.
ಓದಿ: ಮೊಬೈಲ್ ಕ್ಲಿನಿಕ್ಗೆ ಸಿಎಂ ಚಾಲನೆ: ಬೇರೆ ಜಿಲ್ಲೆಗಳಿಗೂ ವಿಸ್ತರಿಸಲು ಚಿಂತನೆ ಎಂದ ಬೊಮ್ಮಾಯಿ