ಮೈಸೂರು: ಹುಣಸೂರು ವಿಧಾನಸಭೆ ಉಪಚುನಾವಣೆ ಅಖಾಡ ರಂಗೇರುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗು ಜೆಡಿಎಸ್ ಮೂರೂ ಪಕ್ಷಗಳು ಗೆಲುವಿಗಾಗಿ ರಣತಂತ್ರ ಹೆಣೆಯುತ್ತಿವೆ.
ಜೆಡಿಎಸ್ ಪಕ್ಷದಿಂದ ಗೆದ್ದು ಹುಣಸೂರು ಶಾಸಕರಾಗಿದ್ದ ಎಚ್. ವಿಶ್ವನಾಥ್ ತಮಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲವೆಂದು ರಾಜೀನಾಮೆ ನೀಡಿ ಅತೃಪ್ತ ಶಾಸಕ ಬಣದೊಂದಿಗೆ ಸೇರಿಕೊಂಡಿದ್ದರು.
ವಿಶ್ವನಾಥ್ ರಾಜೀನಾಮೆಯಿಂದ ಸಮ್ಮಿಶ್ರ ಸರ್ಕಾರ ಬೀಳಲು ಕಾರಣವಾಗಿರುವುದಾಗಿ ಭಾವಿಸಿರುವ ಜೆಡಿಎಸ್, ವಿಶ್ವನಾಥ್ ವಿರುದ್ಧ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಲು ಪಣತೊಟ್ಟಿದೆ. ಕಾಂಗ್ರೆಸ್ ಕೂಡಾ ಹುಣಸೂರು ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿದೆ. ಶತಾಯಗತಾಯ ಫೈಟ್ ಮಾಡಿ ಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನು ಮಣಿಸಲೇಬೇಕೆಂದು ಪಕ್ಷ ಅಚಲ ಹೋರಾಟಕ್ಕಿಳಿದಿದೆ.
ಬಿಜೆಪಿ ಕೂಡ ಎಚ್. ವಿಶ್ವನಾಥ್ ಅವರ 'ತ್ಯಾಗ'ವನ್ನು ಬಲಿದಾನ ಮಾಡಲು ಸಿದ್ಧವಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಮೇಲೆ ಯಾವ ರೀತಿಯ ಅಸ್ತ್ರ ಪ್ರಯೋಗಿಸಬೇಕೆಂದು ಸದ್ದಿಲ್ಲದೆ ಕೆಲಸದಲ್ಲಿ ತೊಡಗಿದೆ.