ಮೈಸೂರು : ಆನ್ಲೈನ್ ಆ್ಯಪ್ಗಳ ಮೂಲಕ ಲೋನ್ ಪಡೆಯಲು ಪ್ರಯತ್ನ ಮಾಡುವವರು ಈ ಸುದ್ದಿಯನ್ನು ಓದಲೇಬೇಕು. ಏಕೆಂದರೆ ಮೈಸೂರಿನಲ್ಲಿ ಅತಿಥಿ ಉಪನ್ಯಾಸಕನೊಬ್ಬ ಆನ್ಲೈನ್ ಆ್ಯಪ್ ಮೂಲಕ ಲೋನ್ ಪಡೆಯಲು ಹೋಗಿ ಬ್ಲಾಕ್ ಮೇಲ್ಗೆ ಒಳಗಾಗಿದ್ದು. ಕೊನೆಗೆ ಸೆನ್ ಪೊಲೀಸರ ಸಹಾಯ ಪಡೆದು ಬಚಾವ್ ಆಗಿದ್ದಾರೆ.
ಮಾನಸ ಗಂಗೋತ್ರಿ ಮೈಸೂರು ವಿಶ್ವವಿದ್ಯಾನಿಲಯಯಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿರುವ ಚಂದ್ರಗುಪ್ತ ಎಂಬುವವರು ಸೂಪರ್ ಆ್ಯಪ್ ಎಂಬುವ ಅಪ್ಲಿಕೇಶನ್ ಮೂಲಕ ಮೂರು ಸಾವಿರ ಸಾಲವನ್ನು ಪಡೆಯಲು ಮುಂದಾಗಿದ್ದರು. ಆದರೆ ದಾಖಲೆಗಳನ್ನು ಪರಿಶೀಲನೆ ನಡೆಸಿದ ನಂತರ ಮೂರು ಸಾವಿರ ಬದಲಾಗಿ 1800 ರೂ. ಮಾತ್ರ ಚಂದ್ರಗುಪ್ತ ಅವರ ಖಾತೆಗೆ ಮೇ.20 ರಂದು ಜಮಾ ಮಾಡಿದ್ದಾರೆ. ಆದರೆ ಅವಧಿ ಮುಗಿಯುವದರೊಳಗೆಯೇ ಅವಧಿ ಮಗಿದಿದೆ ಎಂದು ಹಣ ಮರುಪಾವತಿ ಮಾಡುವಂತೆ ಸೂಪರ್ ಆ್ಯಪ್ ನವರು ಮೆಸೇಜ್ ಮಾಡಿದ್ದಾರೆ.
ಅಶ್ಲೀಲ ಫೋಟೋಗಳ ಮುಖಾಂತರ ಬ್ಲಾಕ್ ಮೇಲ್ : ಈ ಸಂದರ್ಭದಲ್ಲಿ ಚಂದ್ರಗುಪ್ತ ಅವರು ಸಾಲದ ಹಣ 1800 ರೂ. ಹಣಕ್ಕೆ 3 ಸಾವಿರ ಹಣವನ್ನು ಮರುಪಾವತಿ ಮಾಡಿದ್ದರು. ನಂತರ ಆರೋಪಿಗಳು ಮತ್ತಷ್ಟು ಹಣಕ್ಕಾಗಿ ಒತ್ತಾಯಿಸಿದ್ದಾರೆ. ಹೆಚ್ಚುವರಿ ಹಣ ಪಾವತಿಸಲು ನಿರಾಕರಿಸಿದಾಗ ಚಂದ್ರಗುಪ್ತ ಅವರ ಅಕೌಂಟ್ ಅನ್ನು ಹ್ಯಾಕ್ ಮಾಡಿದ್ದು, ಅವರ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸಿದ ಆ್ಯಪ್ ಸಂಸ್ಥೆ, ಚಂದ್ರಗುಪ್ತ ಅವರ ಅಶ್ಲೀಲ ಫೋಟೋ ಒಂದನ್ನು ಎಡಿಟ್ ಮಾಡಿ ಅವರ ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ರವಾನಿಸುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ.
ಇದರಿಂದ ಬೇಸತ್ತ ಅತಿಥಿ ಉಪನ್ಯಾಸಕ ಚಂದ್ರಗುಪ್ತ ಮೈಸೂರಿನ ಸೆನ್ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ವೇಳೆ, ಸೆನ್ ಪೊಲೀಸ್ ಅಧಿಕಾರಿಗಳ ಸಲಹೆ ಪಡೆದ ಚಂದ್ರಗುಪ್ತ ಅವರು, ಆ ಮೂಲಕ ಬ್ಲಾಕ್ ಮೇಲ್ ಮಾಡುತ್ತಿದ್ದ ಖಾಸಗಿ ಲೋನ್ ಆ್ಯಪ್ ನಿಂದ ಬಚಾವ್ ಆಗಿದ್ದಾರೆ. ಆದ್ದರಿಂದ ಖಾಸಗಿ ಆ್ಯಪ್ ಗಳ ಮೂಲಕ ಸಾಲ ಪಡೆಯುವ ಮೊದಲು ಒಮ್ಮೆ ಯೋಚಿಸಬೇಕು. ಇಲ್ಲವಾದಲ್ಲಿ ಈ ರೀತಿಯ ಬ್ಲಾಕ್ ಮೇಲ್ ಗಳು ತಪ್ಪಿದ್ದಲ್ಲ.
ಲವರ್ ಗೆ ಮೆಸೇಜ್ ಮಾಡಿದ್ದಕ್ಕೆ ಚಾಕುವಿನಿಂದ ಸ್ನೇಹಿತನಿಗೆ ಇರಿತ : ಶ್ರೇಯಸ್ ಹಾಗೂ ಶಿವಕುಮಾರ್ ಇಬ್ಬರು ರೂಮ್ ಮೇಟ್ ಗಳಾಗಿದ್ದು, ಜನತಾ ನಗರದ ಮನೆಯೊಂದರಲ್ಲಿ ಕೊಠಡಿಯನ್ನು ಬಾಡಿಗೆ ಪಡೆದು ವಾಸವಿದ್ದರು. ವರುಣಾ ಬಳಿಯ ಗ್ರಾಮದವರಾಗಿದ್ದ ಪ್ರಿಯಾ ಎಂಬಾಕೆಯನ್ನು ಶ್ರೇಯಸ್ ಪ್ರೀತಿಸುತ್ತಿದ್ದನು. ಆದರೆ, ಆ ವಿಷಯ ತಿಳಿದು ಶಿವಕುಮಾರ್ ಪ್ರಿಯಾ ಜೊತೆಗೆ ಚಾಟ್ ಮಾಡಿ ಅವಳೊಂದಿಗೆ ಸಂಪರ್ಕ ಬೆಳೆಸುತ್ತಿದ್ದನು. ಈ ವಿಚಾರ ಶ್ರೇಯಸ್ಗೆ ತಿಳಿದಿತ್ತು.
ಬಳಿಕ ಶಿವಕುಮಾರ್ ಮತ್ತು ಶ್ರೇಯಸ್ ನಡುವೆ ಗಲಾಟೆ ಕೂಡ ನಡೆದು ಶಿವಕುಮಾರ್ಗೆ ಪ್ರಿಯಾ ತಂಟೆಗೆ ಬಾರದಂತೆ ಶ್ರೇಯಸ್ ಎಚ್ಚರಿಕೆ ಸಹ ನೀಡಿದ್ದ. ಆದರೆ ಶಿವಕುಮಾರ್ ಮತ್ತೆ ಪ್ರಿಯಾಗೆ ಮೆಸೇಜ್ ಮಾಡಲು ಶುರು ಮಾಡಿದ್ದಾನೆ. ಇದರಿಂದ ಶ್ರೇಯಸ್ ಕುಪಿತಗೊಂಡ ಶಿವಕುಮಾರ್ ನೊಂದಿಗೆ ನಂಜನಗೂಡಿನ ಹೆದ್ದಾರಿಯ ಬಳಿ ಗಲಾಟೆ ಮಾಡಿದ್ದು, ಆ ಗಲಾಟೆಯಲ್ಲಿ ಶಿವಕುಮಾರ್ಗೆ ಚಾಕುವಿನಿಂದ ಇರಿದಿದ್ದಾನೆ.
ಈ ಸಂಬಂಧ ವಿದ್ಯಾರಣ್ಯ ಪುರಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಕುವಿನಿಂದ ಇರಿತಕ್ಕೊಳಗಾದ ಶಿವಕುಮಾರ್ ನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರಣ್ಯ ಪುರಂ ಠಾಣೆಯ ಪೋಲಿಸರು ಆರೋಪಿ ಶ್ರೇಯಸ್ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಕರ್ತವ್ಯ ಲೋಪ ಆರೋಪದಡಿ ಗಾಣಗಾಪುರ ಪಿಎಸ್ಐ ಅಯ್ಯಣ್ಣ ಅಮಾನತು