ಮೈಸೂರು : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ಗೆ ಎಪಿಎಂಸಿ ವರ್ತಕರ ಸಂಘ, ಒಕ್ಕಲಿಗರ ಸಂಘ ಬೆಂಬಲ ಸೂಚಿಸಿದ್ದರೆ, ಹೋಟೆಲ್ ಮಾಲೀಕರ ಸಂಘ ಪ್ರತಿಭಟನೆಯಿಂದ ಹಿಂದೆ ಸರಿದಿದೆ.
ಈ ಕುರಿತು ಮೈಸೂರು-ಚಾಮರಾಜನಗರ ಒಕ್ಕಲಿಗ ಸಂಘದ ಅಧ್ಯಕ್ಷ ಜಿ.ಮಂಜು ಮಾತನಾಡಿ, ನಾಳಿನ ಭಾರತ್ ಬಂದ್ಗೆ ಒಕ್ಕಲಿಗ ಸಂಘದಿಂದ ಬೆಂಬಲ ಇದೆ. ದೇಶಾದ್ಯಂತ ಅನ್ನದಾತರು ಹೋರಾಟ ಮಾಡುತ್ತಿದ್ದಾರೆ, ಅವರನ್ನು ಬೆಂಬಲಿಸಿ ಮೈಸೂರು ಚಾಮರಾಜನಗರ ಒಕ್ಕಲಿಗ ಸಂಘ ಪ್ರತಿಭಟನೆ ನಡೆಸಲಿದೆ ಎಂದರು. ಎಪಿಎಂಸಿ ವರ್ತಕರ ಸಂಘ ಕೂಡ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದು, ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ರೈತರ ಹೋರಾಟಕ್ಕೆ ಕೈ ಜೋಡಿಸಲಿದೆ.
ಇದನ್ನೂ ಓದಿ : ನಾಳೆ ಭಾರತ್ ಬಂದ್ ಹಿನ್ನೆಲೆ: ಕನ್ನಡಪರ ಸಂಘಟನೆಗಳಿಂದ ಬೆಂಬಲ
ಹೋಟೆಲ್ ಮಾಲೀಕರಿಂದ ಇಲ್ಲ ಬೆಂಬಲ : ಕೊರೊನಾ ಕಾರಣದಿಂದ ಹಲವು ತಿಂಗಳುಗಳ ಕಾಲ ಮುಚ್ಚಿದ್ದ ಹೋಟೆಲ್ಗಳು, ಇತ್ತೀಚೆಗಷ್ಟೇ ಬಾಗಿಲು ತೆರೆದಿವೆ. ಹೀಗಾಗಿ, ಪ್ರತಿಭಟನೆಗೆ ಬೆಂಬಲ ಸೂಚಿಸುತ್ತೇವೆ. ಆದರೆ, ಬಂದ್ಗೆ ಬೆಂಬಲ ನೀಡುವುದಿಲ್ಲ ಎಂದು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣ ಗೌಡ ತಿಳಿಸಿದ್ದಾರೆ.