ಮೈಸೂರು: ಇಂದು ಮಹಿಷಾಸುರ ಇಲ್ಲ, ಆದರೆ ನಮ್ಮಲ್ಲಿರುವ ದುಷ್ಟ ವಿಚಾರಗಳನ್ನು ಬದಿಗೊತ್ತಿ, ಶಿಷ್ಟ ವಿಚಾರಗಳನ್ನು ಮೈಗೂಡಿಸಿಕೊಳ್ಳುವ ದಿನವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ದಸರಾ ಉದ್ಘಾಟನಾ ವೇದಿಕೆ ಭಾಷಣದಲ್ಲಿ ಮಾತನಾಡಿದ ಅವರು, ಈ ಬಾರಿ ದಸರಾ ಹಲವು ವಿಶೇತೆಗಳಿಂದ ಕೂಡಿದೆ. ಎರಡು ವರ್ಷಗಳ ಬಳಿಕ ಅದ್ಧೂರಿ ದಸರಾ ಆಚರಣೆ ಮಾಡಲಾಗುತ್ತದೆ. ಇದು ನಾಡಹಬ್ಬವಾಗಿದ್ದು, ನಾಡಿನ ರೈತರು, ಜನರು ಮನೆ ಮನೆಯಲ್ಲಿ ದಸರಾ ಆಚರಣೆ ಮಾಡುತ್ತಿದ್ದಾರೆ. ನಾಡನ್ನು ಸುಭಿಕ್ಷೆಯಿಂದ ಇಡಲು ನಾಡದೇವತೆ ಚಾಮುಂಡೇಶ್ವರಿಯನ್ನು ಬೇಡುತ್ತೇನೆ ಎಂದರು.
ಬೆಟ್ಟದ ತಾಯಿಯ ಶಕ್ತಿ ಪೀಠ, ನಾಡಿಗೆ ಶಕ್ತಿ ನೀಡುವ ಸಂಚಲನವನ್ನು ನೀಡುತ್ತಿದೆ. ಪ್ರಜಾಪ್ರಭುತ್ವ ಬಂದ ನಂತರವೂ ಇದೇ ಆಚರಣೆ ಮುಂದುವರಿದಿರುವುದು ಸಂತಸದ ವಿಚಾರವಾಗಿದೆ. ನೈಸರ್ಗಿಕ ಸವಾಲುಗಳ ನಡುವೆ ಎಲ್ಲವನ್ನು ಎದುರಿಸಿ, ಜನಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದೇವೆ. ರಾಷ್ಟ್ರಪತಿಗಳು ಬಂದಿರುವುದು ಸಂತಸ ಮತ್ತು ಅಪರೂಪದ ಸಂಗತಿಯಾಗಿದೆ ಎಂದು ಬಣ್ಣಿಸಿದರು.
ಈ ಹಿಂದೆ ದಸರಾ ಉದ್ಘಾಟನೆಗಳಿಗೆ ರಾಷ್ಟ್ರಪತಿಗಳು ಬಂದಿರಲಿಲ್ಲ. ದಸರಾ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿದಾಗ ಸಂತಸದಿಂದ ಒಪ್ಪಿಕೊಂಡರು. ಅಲ್ಲದೇ ದಸರಾ ಉದ್ಘಾಟನೆಗೆ ರಾಷ್ಟ್ರಪತಿ ಬಂದಿರುವುದು ಇದೇ ಮೊದಲು. ಇನ್ನು, ಇಂತಹ ಪವಿತ್ರ ದಿನದಂದು ಕರ್ನಾಟಕವನ್ನು ಎಲ್ಲ ರಂಗದಲ್ಲಿ ಶ್ರೇಷ್ಠವಾಗಿ ಕಟ್ಟುವ ಸಂಕಲ್ಪ ಮಾಡಬೇಕಿದೆ ಎಂದರು.
ಸರ್ವರಿಗೂ ಕಲ್ಯಾಣ ಬಯಸುವ ಚಿಂತನೆ ನೀಡಲಿ, ಕೋವಿಡ್ ಸೇರಿ ಯಾವುದೇ ಆತಂಕ ಎದುರಾಗದಿರಲಿ ಎಂದು ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ನಾಡಿನ ಜನತೆಗೆ ದಸರಾ ಶುಭಾಶಯಗಳನ್ನು ಸಿಎಂ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: ರಾಷ್ಟ್ರಪತಿಗೆ ಮೈಸೂರು ರೇಷ್ಮೆ ಸೀರೆ ಗಿಫ್ಟ್.. ಅದೇ ಸೀರೆ ಧರಿಸಿ ದಸರಾ ಉದ್ಘಾಟಿಸಿದ ಮುರ್ಮು