ಮೈಸೂರು: ಕಂದಾಯ ವಸೂಲಿಗಾಗಿ ಬಂದಿದ್ದ ಗ್ರಾಮ ಪಂಚಾಯತಿ ಪಿಡಿಒ ಮತ್ತು ಕಾರ್ಯದರ್ಶಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ತಿ.ನರಸೀಪುರದ ರಾಮನಾಥಪುರ ಹುಂಡಿ ಗ್ರಾಮದಲ್ಲಿ ನಡೆದಿದೆ.
ತಿ.ನರಸೀಪುರ ತಾಲೂಕಿನ ತುಂಬಲ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮನಾಥಪುರ ಹುಂಡಿ ಗ್ರಾಮದಲ್ಲಿ ಕಂದಾಯ ವಸೂಲಿಗಾಗಿ ಬಂದಿದ್ದ ಪಿಡಿಒ ಮತ್ತು ಕಾರ್ಯದರ್ಶಿಗಳ ಮೇಲೆ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ನಾಗೇಂದ್ರ, ಮಹದೇವನಾಯಕ ಹಾಗೂ ಮಹೇಶ್ ಎಂಬುವವರು ಹಲ್ಲೆ ಎಸಗಿದ್ದಾರೆ. ಘಟನೆಯಿಂದಾಗಿ ಪಿಡಿಒ ಧನಂಜಯ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ತಿ.ನರಸೀಪುರ ಪಟ್ಟಣದಲ್ಲಿ ದೂರು ದಾಖಲಾಗಿದೆ.