ಮೈಸೂರು: ಹಿಂದುತ್ವದ ಅಜೆಂಡಾ ಹೊಂದಿರುವ ನನಗೆ ಬಿಜೆಪಿಯಿಂದ ಟಿಕೆಟ್ ನೀಡುವಂತೆ ಕೇಳಿದ್ದೇನೆ. ಈಗಾಗಲೇ ಶ್ರೀರಾಮ ಸೇನೆಯಿಂದ 25 ಟಿಕೆಟ್ ಕೇಳಿದ್ದು, ಅದರಲ್ಲಿ ಐವರು ಸ್ವಾಮೀಜಿಗಳು ಸೇರಿದ್ದಾರೆ. ಬಿಜೆಪಿ ಟಿಕೆಟ್ ಕೊಡದಿದ್ದರೆ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತೇವೆ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮೈಸೂರಿನಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಿಂದುತ್ವ ಅಜೆಂಡಾದಡಿ ಶ್ರೀರಾಮ ಸೇನೆ 25 ಸ್ಥಾನಗಳಲ್ಲಿ ಸ್ಪರ್ಧಿಸಲು ತೀರ್ಮಾನಿಸಿದೆ.
ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಖಚಿತವಿದ್ದು ಈಗಾಗಲೇ ಜಮಖಂಡಿ, ತೆರೆದಾಳ, ಧಾರವಾಡ ನಗರ, ಶೃಂಗೇರಿ ಹಾಗೂ ಕಾರ್ಕಳ ಕ್ಷೇತ್ರಗಳನ್ನ ಆಯ್ಕೆ ಮಾಡಿಕೊಂಡಿದ್ದೇನೆ. ಅದರಲ್ಲಿ ಒಂದು ಕ್ಷೇತ್ರವನ್ನು ಈ ತಿಂಗಳ ಅಂತ್ಯಕ್ಕೆ ಪ್ರಕಟಿಸುತ್ತೇನೆ ಎಂದು ಅಭಿಪ್ರಾಯ ಹಂಚಿಕೊಂಡರು.
ರಾಜ್ಯದಲ್ಲಿ ಎಸ್ ಸಿ, ಎಸ್ ಟಿ ಮೀಸಲಾತಿ, ಮಹಿಳಾ ಮೀಸಲಾತಿ ಹಾಗೂ ಪದವೀಧರ ಕ್ಷೇತ್ರದಲ್ಲಿ ಮೀಸಲಾತಿ ಇರುವಂತೆ ಬಿಜೆಪಿಯನ್ನು ಹಿಂದುಗಳ ಅಜೆಂಡಾ ಹೊಂದಿರುವ ಶ್ರೀರಾಮ ಸೇನೆಗೂ 25 ಕ್ಷೆತ್ರಗಳಲ್ಲಿ ಟಿಕೆಟ್ ನೀಡುವಂತೆ ಕೇಳಿದ್ದೇವೆ. ಟಿಕೆಟ್ ನೀಡಿದರೆ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತೇವೆ, ಇಲ್ಲದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ ಎಂದರು.
ಬೆಳಗಾವಿ ನಮ್ಮದು : ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿ ಇದೆ. ಈಗ ಗಡಿವಿವಾದದ ಬಗ್ಗೆ ಮಾತನಾಡುವುದು ನ್ಯಾಯಾಂಗ ನಿಂದನೆ ಆಗುತ್ತದೆ. ಈ ವಿಚಾರದಲ್ಲಿ ಯಾರಾದರೂ ಸುಪ್ರೀಂ ಕೋರ್ಟ್ದಲ್ಲಿ ನ್ಯಾಯಾಂಗ ನಿಂದನೆ ಕೇಸ್ ಹಾಕಲು ಅವಕಾಶ ಇದೆ. ನಾನು ಕೂಡ ವಕೀಲರ ಜತೆ ನ್ಯಾಯಾಂಗ ನಿಂದನೆ ಕೇಸ್ ಹಾಕುವ ಕುರಿತು ಚರ್ಚೆ ಮಾಡುತ್ತಿದ್ದೇನೆ ಎಂದರು.
ಆದರೆ ಮಹಾಜನ್ ವರದಿ ಪ್ರಕಾರ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂಬ ವಿಚಾರ ಎಲ್ಲರಿಗೂ ಗೊತ್ತಿದೆ. ಇದರ ಮಧ್ಯೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ರಾಜಕೀಯ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಗಡಿಯನ್ನು ವಿವಾದವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಮುತಾಲಿಕ್ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅಂಡಮಾನ್ ಜೈಲಿನಲ್ಲಿರಲಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಭಾವಚಿತ್ರ ಅಳವಡಿಕೆ ವಿರೋಧಿಸುವ ಕಾಂಗ್ರೆಸ್ಸಿಗರು ಅಯೋಗ್ಯರು. ಬ್ರಿಟಿಷರ ವಿರುದ್ಧ ವೀರ ಸಾವರ್ಕರ್ ಹೋರಾಟ ಮಾಡಿ 22 ವರ್ಷಗಳ ಕಾಲ ಅಂಡಮಾನ್ ಜೈಲಿನಲ್ಲಿದ್ದರು. ಸಾವರ್ಕರ್ ಕಾಂಗ್ರೆಸ್ ನಾಯಕರಂತೆ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿರಲಿಲ್ಲ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲಿಗೆ ಹೋಗಿದ್ದರು. ಅಂಥವರ ಭಾವ ಚಿತ್ರವನ್ನು ಸುವರ್ಣ ಸೌಧದಲ್ಲಿ ಹಾಕಿರುವುದನ್ನು ಸ್ವಾಗತಿಸುತ್ತೇನೆ. ಇದನ್ನ ವಿರೋಧಿಸುವ ಸಿದ್ದರಾಮಯ್ಯ ಒಂದು ದಿನ ಅಂಡಮಾನ್ ಜೈಲಿನಲ್ಲಿ ಇದ್ದು ಬರಲಿ. ಆಗ ಅಲ್ಲಿಯ ವಾಸ್ತವ ಗೊತ್ತಾಗಲಿದೆಯೆಂದು ಪ್ರಮೋದ್ ಮುತಾಲಿಕ್ ಕಿಡಿಕಾರಿದರು.
ಇದನ್ನೂಓದಿ:ಪಠಾಣ್ ವಿವಾದ: ಅಯೋಧ್ಯೆ ಸ್ವಾಮೀಜಿಯಿಂದ ಶಾರುಖ್ ಖಾನ್ಗೆ ಜೀವ ಬೆದರಿಕೆ