ಮೈಸೂರು: ಪುಂಡಾಟ ನಡೆಸಿ ಹಾಸನ ಹಾಗೂ ಸಕಲೇಶಪುರ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮದ ಜನರನ್ನು ಸುಸ್ತು ಹೊಡೆಸಿದ್ದ 'ಅಶ್ವತ್ಥಾಮ' ತನ್ನ ರೋಷಾವೇಶ ಕಡಿಮೆ ಮಾಡಿಕೊಂಡಿದ್ದು ಇದೀಗ ನಾಡಹಬ್ಬ ದಸರಾ ಉತ್ಸವಕ್ಕೆ ಆಯ್ಕೆ ಆಗಿದ್ದಾನೆ.
ಜನರಿಗೆ ಉಪಟಳ ಕೊಡುತ್ತಿದ್ದ ಈ ಕಾಡಾನೆಯನ್ನು ಅಭಿಮನ್ಯು, ಅರ್ಜುನ ಸೇರಿದಂತೆ ಇನ್ನಿತರ ಆನೆಗಳನ್ನು ಬಳಸಿ ವಿಶೇಷ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿತ್ತು. ಬಳಿಕ 30 ವರ್ಷದ ಗಂಡಾನೆಯನ್ನು ದೊಡ್ಡಹರವೆ ಆನೆ ಕ್ಯಾಂಪ್‌ನ ಕ್ರಾಲ್‌ನಲ್ಲಿಟ್ಟು ತರಬೇತಿ ನೀಡಿದ ಬಳಿಕ 'ಅಶ್ವತ್ಥಾಮ' ಎಂದು ಅರಣ್ಯಾಧಿಕಾರಿಗಳು ಹೆಸರಿಟ್ಟಿದ್ದರು.

ಒಂದು ವರ್ಷದಲ್ಲೇ ಕ್ರಾಲ್‌ನಿಂದ ಹೊರಬಂದ ಅಶ್ವತ್ಥಾಮನನ್ನು ಆನೆ ಶಿಬಿರದ ಸುತ್ತಮುತ್ತ ಬಿಟ್ಟು ಪಳಗಿಸಲಾಗಿದೆ. ಆ ಶಿಬಿರದ ಏಕೈಕ ಗಂಡಾನೆಯಾಗಿದ್ದ ಅಶ್ವತ್ಥಾಮ ಹೆಣ್ಣಾನೆಗಳಾದ ಕುಮಾರಿ, ರೂಪ, ಲಕ್ಷ್ಮೀ, ಅನಸೂಯ ಆನೆಗಳ ಜೊತೆಯಲ್ಲಿದ್ದಾನೆ.
34 ವರ್ಷ ಪ್ರಾಯದ ಗಜರಾಜ 2.85 ಮೀಟರ್ ಎತ್ತರ, 3.46 ಮೀಟರ್ ಶಾರೀರದ ಉದ್ದ ಹೊಂದಿದ್ದಾನೆ. 3,630 ಕೆ.ಜಿ ತೂಕವಿದ್ದಾನೆ. ಅಶ್ವತ್ಥಾಮನಿಗೆ ಮಾವುತನಾಗಿ ಶಿವು, ಕಾವಾಡಿಯಾಗಿ ಗಣೇಶ ಕೆಲಸ ನಿರ್ವಹಿಸುತ್ತಿದ್ದಾರೆ.
ಸಮತಟ್ಟಾದ ಬೆನ್ನು ಇರುವುದರಿಂದ ಮುಂದಿನ ದಿನಗಳಲ್ಲಿ ಅಂಬಾರಿ ಹೊರಲು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಯೋಜಿಸಿದ್ದಾರೆ. ಇದೇ ಕಾರಣಕ್ಕೆ ಪುಂಡಾಟ ಆಡಿ ಆತಂಕ ಸೃಷ್ಟಿಸಿದ್ದ ಆನೆ ಚೊಚ್ಚಲ ಬಾರಿಗೆ ದಸರಾದಲ್ಲಿ ರಾಜಗಾಂಭೀರ್ಯದ ಹೆಜ್ಜೆ ಹಾಕಿ ಗಮನ ಸೆಳೆಯಲಿದ್ದಾನೆ.
ಇದನ್ನೂ ಓದಿ: ಮೈಸೂರು ಚಿನ್ನದಂಗಡಿ ದರೋಡೆ ಪ್ರಕರಣ: ಬಂಧಿತರಿಂದ ಹೊರಬಿತ್ತು ಸ್ಫೋಟಕ ಮಾಹಿತಿ