ಮೈಸೂರು: ಕಲೆ ಮತ್ತು ಇತಿಹಾಸ ನಾಡಿನ ಶ್ರೀಮಂತಿಕೆಯ ಸಂಕೇತ ಎಂದು ವಸತಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬಣ್ಣಿಸಿದ್ದಾರೆ.
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ನಗರದ ಅರಮನೆ ಮುಂಭಾಗ ಆಯೋಜಿಸಿದ್ದ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಹಾಗೂ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ನಮ್ಮ ನಾಡು ಭವ್ಯ ಪರಂಪರೆ ಹೊಂದಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಈ ಭವ್ಯ ಪರಂಪರೆಯನ್ನು ದೇಶದುದ್ದಕ್ಕೂ ಪಸರಿಸಬೇಕಿದೆ ಎಂದಿದ್ದಾರೆ.
ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾತನಾಡಿ, ನಾಡ ಹಬ್ಬ ನಾಗರಿಕತೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಗೆ ಜೀವಂತ ಸಾಕ್ಷಿಯಾಗಿದೆ ಎಂದರು. ಪರಂಪರೆ ಜೊತೆಗೆ ಭಾರತೀಯರಾದ ನಾವು ಆಧುನಿಕ ಆವಿಷ್ಕಾರಗಳಲ್ಲೂ ಮುಂದಡಿ ಇಟ್ಟಿದ್ದೇವೆ. ಇದು ಈ ಮಣ್ಣಿನ ಗುಣ ಎಂದರು.
ಇದೇ ವೇಳೆ ನಾಡಿನ ಹೆಸರಾಂತ ಸಂಗೀತಗಾರ ಪ್ರೊ. ಬಿ.ಎಸ್.ವಿಜಯ ರಾಘವನ್ ಅವರಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಂದಾಯ ಸಚಿವ ಆರ್. ಅಶೋಕ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಎಸ್.ಎ.ರಾಮದಾಸ್ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಂಸದರಾದ ಪ್ರತಾಪ್ ಸಿಂಹ, ಮುನಿಸ್ವಾಮಿ, ಶಾಸಕ ಎಲ್.ನಾಗೇಂದ್ರ ಇತರರು ಇದ್ದರು.