ಮೈಸೂರು: ಮನೆ ಕಳ್ಳತನ ಮಾಡುತ್ತಿದ್ದ ಆರೋಪಿ ಹಾಗೂ ಈತನ ಕೃತ್ಯಗಳಿಗೆ ಸಹಕರಿಸುತ್ತಿದ್ದ ಇಬ್ಬರನ್ನು ಬಂಧಿಸಿ, ಬಂಧಿತರಿಂದ 21,47,500 ರೂ. ಮೌಲ್ಯದ 391 ಗ್ರಾಂ ಚಿನ್ನಾಭರಣ, ಒಂದು ಕಾರು, ವಿದೇಶಿ ರಿವಾಲ್ವರ್, 6 ಜೀವಂತ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹಾಸನ ಜಿಲ್ಲೆಯ ಭುವನಹಳ್ಳಿ ಗ್ರಾಮದ ದಿಲೀಪ್ ಕುಮಾರ್(38), ಮೈಸೂರಿನ ಕಡಕೊಳ ಗ್ರಾಮದ ಮಂಜ(35), ಚಾಮರಾಜನಗರದ ಹುಲ್ಲೇಪುರ ಗ್ರಾಮದ ರಾಜೇಂದ್ರ(29) ಬಂಧಿತ ಆರೋಪಿಗಳು.
ಫೆ. 14ರಂದು ಮೂವರು ಒಂದು ಕಾರಿನಲ್ಲಿ ರಿಂಗ್ ರಸ್ತೆಯ ಮೂಲಕ ತಮ್ಮ ಬಳಿ ಇರುವ ರಿವಾಲ್ವರ್ ಮಾರಾಟ ಮಾಡಲು ಹೋಗುತ್ತಿರುವುದಾಗಿ ಕುವೆಂಪುನಗರ ಪೊಲೀಸ್ ಇನ್ಸ್ಪೆಕ್ಟರ್ಗೆ ಮಾಹಿತಿ ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿಗಳು ಬರುತ್ತಿದ್ದ ಕಾರನ್ನು ನಿಲ್ಲಿಸಿ ವಶಕ್ಕೆ ಪಡೆದಿದ್ದಾರೆ.
ಬಳಿಕ ವಿಚಾರಣೆ ಮಾಡಲಾಗಿ ಆರೋಪಿ ದಿಲೀಪ್ ಕುಮಾರ್ ಕುವೆಂಪುನಗರ, ವಿಜಯನಗರ ಹಾಗೂ ಅಶೋಕಪುರಂ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮನೆ ಕಳ್ಳತನ ಮಾಡಿದ್ದು, ಬೆಂಗಳೂರಿನ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಕಾರನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಕಳ್ಳತನ ಮಾಡಿಕೊಂಡು ತರುತ್ತಿದ್ದ ಚಿನ್ನಾಭರಣಗಳನ್ನು ದಿಲೀಪ್ ಕುಮಾರ್ ತನ್ನ ಗೆಳೆಯರಾದ ಮಂಜು ಮತ್ತು ರಾಜೇಂದ್ರನಿಗೆ ಕೊಟ್ಟು ಮುತ್ತೂಟ್ ಫಿನ್‍ಕಾರ್ಪ್, ಅಟ್ಟಿಕಾ ಗೋಲ್ಡ್ ಕಂಪನಿಗಳಲ್ಲಿ ಗಿರವಿ ಇಟ್ಟಿರುವುದಾಗಿ ತಿಳಿಸಿದ್ದಾನೆ.
ವಿಜಯನಗರದ ಮನೆಯೊಂದರಲ್ಲಿ ಕಳ್ಳತನ ಮಾಡುವ ಸಮಯದಲ್ಲಿ ರಿವಾಲ್ವಾರ್ ಮತ್ತು ಗುಂಡುಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ. ಆರೋಪಿ ದಿಲೀಪ್ ಕುಮಾರ್ ಮೇಲೆ ಈ ಹಿಂದೆ ಸರಸ್ವತಿಪುರಂ, ನಜರ್ ಬಾದ್ ಹಾಗೂ ಬೆಂಗಳೂರಿನ ಜೆ.ಪಿ ನಗರ ಪೊಲೀಸ್ ಠಾಣೆಗಳಲ್ಲಿ ಮನೆಕಳ್ಳತನ ಪ್ರಕರಣಗಳು ದಾಖಲಾಗಿವೆ.