ಮೈಸೂರು: ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ-20 ಕ್ರಿಕೆಟ್ ಸರಣಿ ಆಗಸ್ಟ್ 7ರಂದು ಮೈಸೂರಿನಲ್ಲಿ ಆರಂಭವಾಗಲಿದೆ. ಇದರ ಅಂಗವಾಗಿ ಇಂದು ನಗರದ ಖಾಸಗಿ ಹೋಟೆಲ್ನಲ್ಲಿ ಮಹಾರಾಜ ಟ್ರೋಫಿಯ ಬ್ರಾಂಡ್ ರಾಯಭಾರಿಯಾಗಿರುವ ನಟ ಕಿಚ್ಚ ಸುದೀಪ್ ಆರು ತಂಡಗಳ ನಾಯಕರನ್ನು ಪ್ರಕಟಿಸಿ ಟ್ರೋಫಿಯನ್ನು ಅನಾವರಣಗೊಳಿಸಿದರು.
ನಂತರ ಮಾತನಾಡಿದ ಅವರು, ಇಂತಹ ಪ್ರತಿಷ್ಠಿತ ಟೂರ್ನಿಗೆ ಬ್ರಾಂಡ್ ರಾಯಭಾರಿಯಾಗಿ ನೇಮಕಗೊಂಡಿರುವುದು ಸಂತಸ ತಂದಿದೆ. ಈ ಹೊಸ ಆವೃತ್ತಿ ಮುಂದಿನ ದಿನಗಳಲ್ಲಿ ಯಶಸ್ಸು ಕಾಣಲಿ. ಈ ಹೊಸ ಆವೃತ್ತಿಯ ಟೂರ್ನಿಯನ್ನು ಆಯೋಜನೆ ಮಾಡುತ್ತಿರುವುದು ಕ್ರಿಕೆಟ್ ಅಸ್ತಿತ್ವ ಮತ್ತು ಕ್ರೀಡೆಯ ಉಳಿವಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
6 ತಂಡಗಳ ನಾಯಕರ ಘೋಷಣೆ: ಈ ಬಾರಿಯ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ-20 ಟೂರ್ನಿಯಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕರಾಗಿ ಭಾರತ ತಂಡದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಜವಾಬ್ದಾರಿ ವಹಿಸಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮಯಾಂಕ್ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದರು.
ಗುಲಬರ್ಗಾ ಮೈಸ್ಟಿಕ್ ತಂಡದ ನಾಯಕನ ಜವಾಬ್ದಾರಿಯನ್ನು ಮನೀಶ್ ಪಾಂಡೆ ಅವರಿಗೆ ನೀಡಲಾಗಿದೆ. ಮೈಸೂರು ವಾರಿಯರ್ಸ್ ತಂಡವನ್ನು ಕರುಣ್ ನಾಯರ್ ಮುನ್ನಡೆಸಲಿದ್ದಾರೆ. ಅನುಭವಿ ಸ್ಪಿನ್ ಬೌಲರ್ ಕೆ.ಗೌತಮ್ ಶಿವಮೊಗ್ಗ ಸೈಕರ್ಸ್ ತಂಡದ ನಾಯಕರಾಗಿ ಹಾಗೂ ಸಮರ್ಥ್ ಆರ್. ಮಂಗಳೂರು ಯುನೈಟೆಡ್ ತಂಡದ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ವೇಗದ ಬೌಲರ್ ಅಭಿಮನ್ಯು ಮಿಥುನ್ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಆಗಸ್ಟ್ 7ರಿಂದ ಮೈಸೂರಿನಲ್ಲಿ ಆರಂಭವಾಗಲಿರುವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ-20 ಟೂರ್ನಿಯನ್ನು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಉದ್ಘಾಟನೆ ಮಾಡಲಿದ್ದಾರೆ.
ಇದನ್ನೂ ಓದಿ: Commonwealth Games Women Cricket: ರೋಡ್ರಿಗಾಸ್ - ರೇಣುಕಾ ಸಿಂಗ್ ಮಿಂಚಿನ ಆಟ.. ಸೆಮಿಸ್ಗೆ ಲಗ್ಗೆಯಿಟ್ಟ ಭಾರತ!