ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿ ಫಿಲ್ಮ್ ಸಿಟಿ ನಿರ್ಮಾಣವಾಗಲಿದೆ ಎಂದು 5 ವರ್ಷಗಳ ಹಿಂದೆ ಫಲವತ್ತಾದ ಕೃಷಿ ಭೂಮಿಯನ್ನು ಕಳೆದುಕೊಂಡ ಅನ್ನದಾತರರು ಸೂಕ್ತ ಪರಿಹಾರವೂ ಸಿಗದೇ, ಇತ್ತ ಉದ್ಯೋಗವೂ ಇಲ್ಲದೇ, ಖಾಲಿ ಮೈದಾನ ನೋಡಿಕೊಂಡು ತಿರುಗಾಡುವಂತಾಗಿದೆ. ಆದ್ರೆ ರಾಜಕಾರಣಿಗಳು ಮಾತ್ರ ಹಗ್ಗ ಜಗ್ಗಾಟದಲ್ಲೇ ದಿನಗಳನ್ನು ದೂಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಸಿಲಿಕಾನ್ ಸಿಟಿಯಷ್ಟೇ ವೇಗವಾಗಿ ತಾಂತ್ರಿಕತೆ ಹಾಗೂ ಉದ್ಯೋಗದಲ್ಲಿ ಬೆಳೆಯುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರಿಗೆ ಫಿಲ್ಮ್ ಸಿಟಿ ಬರಲಿದೆ ಎಂದು ಖ್ಯಾತ ನಿರ್ದೇಶಕ ರಾಜೇಂದ್ರ ಬಾಬು ಸಿಂಗ್ ನಾಲ್ಕು ವರ್ಷದ ಹಿಂದೆ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಮೈಸೂರಿನ ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿ ಈ ಸಂಬಂಧ ಸೆ.29ರ 2015ರಂದು ಒಪ್ಪಿಗೆ ಪಡೆದುಕೊಂಡರು.
ಅದರಂತೆ ಹಿಮ್ಮಾವು ಗ್ರಾಮಕ್ಕೆ ರಾಜೇಂದ್ರ ಬಾಬು ಸಿಂಗ್, ಅಂದಿನ ಜಿಲ್ಲಾಧಿಕಾರಿ ಶಿ.ಶಿಖಾ ಸೇರಿದಂತೆ ಕನ್ನಡದ ಕೆಲ ನಟರು ಹಾಗೂ ಅಧಿಕಾರಿಗಳು ಅಲ್ಲಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದರು.
114 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕವಾಗಿ ನೋಯ್ಡಾದಲ್ಲಿರುವಂತೆ ಚಿತ್ರನಗರಿ ಮಾಡುವುದಾಗಿ ಮಾತುಕತೆಗಳು ಹರಿದಾಡಿದವು. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯಲ್ಲಿ ಫಿಲ್ಮ್ ಸಿಟಿ ಮಾಡಬೇಕೆಂಬ ಹಂಬಲ ಹೊಂದಿದ್ದರು.
ಹಾಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್ ಅವರು ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ಮಾಡಲು ಅಭಿಲಾಷೆ ವ್ಯಕ್ತಪಡಿಸಿದ್ದರು. ಆದರೀಗ ದೊಡ್ಡಬಳ್ಳಾಪುರ ಜಿಲ್ಲೆಯಲ್ಲಿ ಫಿಲ್ಮ್ ಸಿಟಿ ಆಗಬೇಕು ಎನ್ನುವ ಕೂಗು ಎದ್ದಿದೆ. ಮುಂದೆ ಯಾವ ಜಿಲ್ಲೆಗೆ ಫಿಲ್ಮ್ ಸಿಟಿ ಹೋಗಲಿದೆ ಎಂಬುದನ್ನು ಕಾದು ನೋಡಬೇಕಿದೆ.