ಮೈಸೂರು: ಕೋವಿಡ್ ಸಂದರ್ಭದಲ್ಲಿ ಅಚ್ಚುಕಟ್ಟಾದ ಚಿಕಿತ್ಸೆ ಹಾಗೂ ಆರೈಕೆ ನೀಡುತ್ತ ಬಂದಿರುವ ಇಲ್ಲಿನ ಸರ್ಕಾರಿ ಚೆಲುವಾಂಬ ಹೆರಿಗೆ ಆಸ್ಪತ್ರೆಯು ಸಾವಿರಾರು ತಾಯಂದಿರ ಪಾಲಿನ ಸಂಜೀವಿನಿಯಾಗಿ ಹೊರ ಹೊಮ್ಮಿದೆ.
100 ವರ್ಷ ತುಂಬಿದ ಹಳೆಯದಾದ ಈ ಆಸ್ಪತ್ರೆ ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಮಡಿಕೇರಿ ಜನರಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಸಂಜೀವಿನಿಯಾಗಿದೆ. ಇದೇ ಕಾರಣಕ್ಕೆ ಈ ಸರ್ಕಾರಿ ಆಸ್ಪತ್ರೆಯನ್ನು ಹೆರಿಗೆ ಆಸ್ಪತ್ರೆ ಎಂದೂ ಕರೆಯುತ್ತಾರೆ. ಇನ್ನು ಮಹಾಮಾರಿ ಕೊರೊನಾ ಸಂದರ್ಭದಲ್ಲಿ ತಾಯಂದಿರಿಗಾಗಿ ಆಸ್ಪತ್ರೆ ತೆಗೆದುಕೊಂಡ ವಿಶೇಷ ಮುತುವರ್ಜಿ ನಿಜವಾಗಿಯೂ ಇಲ್ಲಿನ ಜನರ ಪಾಲಿಗೆ ಮರು ಜನ್ಮ ಅನ್ನಿಸಿದೆ.
ಕೋವಿಡ್ನ ಆರಂಭದ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳು ಗರ್ಭಿಣಿಯನ್ನು ಸೇರಿಕೊಳ್ಳಲು ಹಿಂದು - ಮುಂದು ನೋಡುತ್ತಿದ್ದವು. ಅಂತಹ ಸಮಯದಲ್ಲಿ ಇಲ್ಲಿ ಕಳೆದ ಮಾರ್ಚ್ನಿಂದ ಇಲ್ಲಿಯವರೆಗೆ ಪ್ರತಿ ತಿಂಗಳು 800 ರಿಂದ 900 ಗರ್ಭಿಣಿಯರ ಯಶಸ್ವಿ ಹೆರಿಗೆ ಮಾಡಿಸಲಾಗಿದೆ. ಅಷ್ಟೇ ಅಲ್ಲದೇ ಅವರಿಗಾಗಿಯೇ ಪಕ್ಕದಲ್ಲೇ ಪ್ರತ್ಯೇಕ ಕಟ್ಟಡ ತೆರೆದು 128 ಮಂದಿ ಪಾಸಿಟಿವ್ ತಾಯಂದಿರಿಗೆ ಹೆರಿಗೆ ಮಾಡಿಸಿದ ಕೀರ್ತಿ ಈ ಚೆಲುವಾಂಬ ಆಸ್ಪತ್ರೆಯ ಡಾಕ್ಟರ್ಗೆ ಸಲ್ಲುತ್ತದೆ.
ಲಾಕ್ಡೌನ್ ವೇಳೆ, ಖಾಸಗಿ ಆಸ್ಪತ್ರೆಗಳು ಹೆರಿಗೆಗಾಗಿ ಯಾರನ್ನು ದಾಖಲು ಮಾಡಿಕೊಳ್ಳುತ್ತಿರಲಿಲ್ಲ, ಇಂತಹ ಸಂದರ್ಭದಲ್ಲಿ ಎಲ್ಲ ಸಿಬ್ಬಂದಿ, ಡಾಕ್ಟರ್ಗಳನ್ನು ಆಸ್ಪತ್ರೆಯಲ್ಲೇ ಇರಿಸಿಕೊಂಡು ವಿಶೇಷ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು 4 ತಿಂಗಳ ಕಾಲ ಪಾಸಿಟಿವ್ ತಾಯಂದಿರಿಗೂ ಹೆರಿಗೆ ಮಾಡಿಸಿದ್ದೇವೆ. ಸಾಮಾನ್ಯ ದಿನಗಳಲ್ಲಿ ತಿಂಗಳಿಗೆ 800 ಹೆರಿಗೆಗಳು ಆಗುತ್ತವೆ. ಆದರೆ, ಈ ಸಂದರ್ಭದಲ್ಲಿ ನಮ್ಮಲ್ಲಿ 900ಕ್ಕೂ ಹೆಚ್ಚು ಹೆರಿಗೆಗಾಳಾಗಿವೆ. ಲಾಕ್ಡೌನ್ ಸಂದರ್ಭದಲ್ಲಿ ನಮ್ಮ ಕೆಲಸವೂ ಸಹ ಚಾಲೆಂಜಿಂಗ್ ಆಗಿತ್ತು ಎನ್ನುತ್ತಾರೆ ಚೆಲುವಾಂಬ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಪ್ರಮೀಳಾ.