ಮೈಸೂರು: ಹಣಕ್ಕಾಗಿ ತಂದೆ-ಮಗನನ್ನು ಅಪಹರಣ ಮಾಡಿದ್ದ 8 ಜನ ಆರೋಪಿಗಳಿಗೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ತಲಾ 5 ಸಾವಿರ ರೂ. ದಂಡ ವಿಧಿಸಿ ಮೈಸೂರಿನ 5ನೇ ಎಡಿಜೆ ನ್ಯಾಯಾಲಯ ತೀರ್ಪು ನೀಡಿದೆ.
ಬೆಂಗಳೂರಿನ ಪದ್ಮನಾಭನಗರದ ಹೇಮಂತ್‌ಕುಮಾರ್, ವಿಜಯನಗರ ಹಂಪಿನಗರ ನಿವಾಸಿ ಕಿಶೋರ್ ಕುಮಾರ್, ಕವಿತಾ ಲೇಔಟ್‌ನ ಹೇಮಂತ್‌ಕುಮಾರ್, ಬ್ಯಾಟರಾಯನಪುರ ಅಮೃತಹಳ್ಳಿ ನಿವಾಸಿ ರಾಜೇಶ್, ಕೆಂಪೇಗೌಡನಗರ ನಿವಾಸಿ ಕೆ.ವಿ.ಚರಣ್, ತುಮಕೂರು ಜಿಲ್ಲೆಯ ಕಗ್ಗೆರೆ ಗ್ರಾಮದ ನಿವಾಸಿಗಳಾದ ವೆಂಕಟೇಶ್, ಕೀರ್ತಿಕುಮಾರ್, ಹಾಸನ ತಾಲೂಕಿನ ತವರದೇವರಕೊಪ್ಪಲು ನಿವಾಸಿ ಪ್ರವೀಣ ಶಿಕ್ಷೆಗೊಳಗಾದವರು.
ಏನಿದು ಪ್ರಕರಣ:
2019ರ ಜ.13ರಂದು ಮೋಹನ್ ಹಾಗೂ ಅವರ ಪುತ್ರ ತುಷಾರ್ ಚಿಕಿತ್ಸೆಗಾಗಿ ಯಾದವಗಿರಿ ಪರಮಹಂಸ ರಸ್ತೆಯಲ್ಲಿರುವ ಚೇತನ್ ಕ್ಲಿನಿಕ್‌ಗೆ ಬಂದಿದ್ದ ವೇಳೆಯಲ್ಲಿ ಈ ಎಂಟು ಮಂದಿ ಅಪಹರಣ ಮಾಡಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗಾಗಿ ಅಂದಿನ ಎಸಿಪಿ ಎ.ಕೆ ಸುರೇಶ್ ಅವರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಅರುಣ್ ನಾಗೇಗೌಡ, ಹೆಚ್.ಎಂ.ಮಹದೇವಪ್ಪ, ಸಿ.ಟಿ.ಜಯಕುಮಾರ್, ಧನಂಜಯ ಹಾಗೂ ಪಿಎಸ್‌ಐ ಗುರುಪ್ರಸಾದ್ ಅವರ ತಂಡ ರಚಿಸಲಾಗಿತ್ತು. ಆರೋಪಿಗಳನ್ನು ದಸ್ತಗಿರಿ ಮಾಡಿ, ಅವಶ್ಯಕ ದಾಖಲಾತಿಗಳನ್ನು ಸಂಗ್ರಹಿಸಿ, ನಿಗದಿತ ಅವಧಿಯಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 5ನೇ ಎಡಿಜೆ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಜಿ.ಕುರವಟ್ಟಿ ಅವರು 8 ಆರೋಪಿಗಳಿಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 5 ಸಾವಿರ ರೂಪಾಯಿಗಳ ದಂಡ ವಿಧಿಸಿದ್ದಾರೆ. ದಂಡ ಕಟ್ಟದಿದ್ದಲ್ಲಿ 2 ತಿಂಗಳು ಸಾದಾ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.