ಮೈಸೂರು: ಮದುವೆಯಾಗಿ ಎರಡು ವರ್ಷ ಆಗಿತ್ತು. ಒಂದೂವರೆ ವರ್ಷ ತವರು ಮನೆಯಲ್ಲೇ ಇದ್ದ ಗೃಹಿಣಿ ಇತ್ತೀಚೆಗೆ ಗಂಡನ ಮನೆಗೆ ತೆರಳಿದ್ದಳು. ಗಂಡನ ಮನೆ ಸೇರಿದ ಕೆಲ ದಿನಗಳಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿಯ ಮೃತದೇಹ ಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ಹಿನ್ನೆಲೆ...
ನಂಜನಗೂಡು ತಾಲೂಕಿನ ಕೂಡ್ಲಾಪುರ ಗ್ರಾಮದ ಕುಮಾರಿಯನ್ನು ಮೈಸೂರಿನ ಕಾರ್ಪೆಂಟರ್ ಮಹೇಶ್ಗೆ ಮದುವೆ ಮಾಡಿಕೊಡಲಾಗಿತ್ತು. ಪತಿ-ಪತ್ನಿ ನಡುವೆ ಸಾಮರಸ್ಯ ಮೂಡಲೇ ಇಲ್ಲ. ಕುಮಾರಿ ಎರಡು ವರ್ಷಗಳ ವೈವಾಹಿಕ ಜೀವನದ ಒಂದೂವರೆ ವರ್ಷವನ್ನು ತವರು ಮನೆಯಲ್ಲೇ ಕಳೆದಿದ್ದರು.
ಇತ್ತೀಚೆಗೆ ಹಿರಿಯರ ಮಧ್ಯಸ್ಥಿಕೆಯಲ್ಲಿ ಮಹೇಶ್ ತನ್ನ ಪತ್ನಿ ಕುಮಾರಿಯನ್ನು ಮೈಸೂರಿನಲ್ಲಿರುವ ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಎಲ್ಲವೂ ಸರಿಹೋಯ್ತು ಎನ್ನುವ ಹೊತ್ತಿಗೆ ಕುಮಾರಿ ಶವ ಗಣೇಶ ನಗರ ಬಡಾವಣೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕುಮಾರಿ ಮನೆಯವರೇನೂ ಸಿರಿವಂತರಲ್ಲ. ತಂದೆ-ತಾಯಿ ಅವಿದ್ಯಾವಂತರು. ಅಣ್ಣಂದಿರು ಮುಂದೆ ನಿಂತು ಮದುವೆ ಮಾಡಿಕೊಟ್ಟಿದ್ದರು. ಮದುವೆ ಸಂದರ್ಭದಲ್ಲೂ ಒಂದು ಲಕ್ಷ ರೂ.ವರೆಗೂ ಹಣ, 45 ಗ್ರಾಂ ಚಿನ್ನಾಭರಣಗಳನ್ನು ವರದಕ್ಷಿಣೆಯಾಗಿ ಕೊಟ್ಟಿದ್ದರು. ಹಂತ ಹಂತವಾಗಿ 3.5 ಲಕ್ಷ ರೂ.ವರೆಗೂ ಹಣ ಕೊಡಲಾಗಿತ್ತು. ಮತ್ತೆ 60 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಗಂಡನ ಮನೆಯವರು ಮತ್ತಷ್ಟು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಕುಮಾರಿಯ ಪತಿ ಮಹೇಶ್, ಅತ್ತೆ ಬಸಮ್ಮಣ್ಣಿ, ಮಾವ ಮಹದೇವ ಶೆಟ್ಟಿ, ಮೈದುನ ಮನು, ನಾದಿನಿ ಚೈತ್ರಾ ಎಲ್ಲರೂ ಸೇರಿಕೊಂಡು ಕೊಲೆ ಮಾಡಿದ್ದಾರೆ. ಬಳಿಕ ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ ಎಂಬುದು ಗೃಹಿಣಿ ಪೋಷಕರ ಆರೋಪವಾಗಿದೆ.
ಕುಮಾರಿ ನಿಧನದ ಹಿನ್ನೆಲೆ ಮೈಸೂರಿನ ಖಾಸಗಿ ಆಸ್ಪತ್ರೆಯ ಎದುರು ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಆರೋಪದಡಿ ಮತ್ತು ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ. ಪತಿ ಮಹೇಶ್ನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.