ಮೈಸೂರು: ಜಿಲ್ಲೆಯ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನ ಬಳಿ ಭಿಕ್ಷುಕಿಯ ಮಗು ಕದ್ದೊಯ್ದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಂಜನಗೂಡಿನಲ್ಲಿ ಮಗು ಅಪಹರಣ ಕೇಸ್ ಸುಖಾಂತ್ಯ ಕಂಡಿದ್ದು, ಘಟನೆ ನಡೆದ 3 ದಿನಗಳಲ್ಲೇ ಈ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಘಟನೆ ಹಿನ್ನೆಲೆ...
ನಂಜನಗೂಡು ತಾಲೂಕು ಹುಣಸೆಕೊಪ್ಪ ಗ್ರಾಮದ ಗಂಗರಾಜು (47) ಎಂಬಾತ ನಂಜನಗೂಡು ದೇವಸ್ಥಾನದ ಬಳಿ ಭಿಕ್ಷುಕಿ ಪಾರ್ವತಿ ಎಂಬಾಕೆಯ 3 ವರ್ಷದ ವರ್ಷದ ಮಗುವನ್ನ ಅಪಹರಿಸಿದ್ದ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆ ನಡೆದ 3 ದಿನಗಳಲ್ಲೇ ಅಪಹರಣ ಪ್ರಕರಣದಲ್ಲಿ ಪೊಲೀಸರು ಆರೋಪಿ ಗಂಗರಾಜುನನ್ನು ಬಂಧಿಸಿದ್ದರು.
ಮಗಳಿಗಾಗಿ ಕಳ್ಳತನ...
ನನ್ನ ಮಗಳಿಗೆ ನಾಲ್ಕು ವರ್ಷಗಳಿಂದ ಮಕ್ಕಳಾಗಿಲ್ಲ. ಮಗುವೊಂದನ್ನ ತಂದು ಪೋಷಿಸಿದ್ರೆ ಮಗಳಿಗೆ ಮಕ್ಕಳಾಗುತ್ತವೆ ಎಂಬ ನಂಬಿಕೆ. ಹೀಗಾಗಿ ನಂಜನಗೂಡು ದೇವಾಲಯದ ಬಳಿ ಆಟವಾಡುತ್ತಿದ್ದ ಮಗುವನ್ನ ಅಪಹರಿಸಿ ನನ್ನ ಮನೆಗೆ ಕರೆ ತಂದಿದ್ದೆ ಎಂದು ಗಂಗರಾಜು ತನ್ನ ತಪ್ಪನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಮಗಳ ಸಂತಾನ ಭಾಗ್ಯಕ್ಕಾಗಿ ಮಗು ಅಪಹರಿಸಿ ಸಿಕ್ಕಿಬಿದ್ದ ಗಂಗರಾಜುನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಸಿಗ್ತಿಲ್ಲ ಭಿಕ್ಷುಕಿಯ ಮೊದಲನೇ ಮಗು!
ನಾಲ್ಕು ವರ್ಷಗಳ ಹಿಂದೆ ಇದೇ ಭಿಕ್ಷುಕಿಯ ಗಂಡು ಮಗುವನ್ನ ಕೆಲವರು ಅಪಹರಿಸಿದ್ದರು. ಆದ್ರೆ ಆ ಮಗು ಈವರೆಗೆ ಪತ್ತೆಯಾಗದ ಹಿನ್ನೆಲೆ ಈ ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ.
ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.