ಮೈಸೂರು: ಜಮೀನು ವಿವಾದದ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ಗ್ರಾಮಕ್ಕೆ ವ್ಯಕ್ತಿಯೊಬ್ಬರು ಬೈಕ್ನಲ್ಲಿ ಬರುತ್ತಿದ್ದರು. ಬೈಕ್ನಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ಹೆದ್ದಾರಿಯಲ್ಲೇ ಅಡ್ಡಗಟ್ಟಿದ ಮತ್ತೊಬ್ಬ ವ್ಯಕ್ತಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಮೈಸೂರು - ಮಡಿಕೇರಿ ಹೆದ್ದಾರಿಯ ಸೋಮನಹಳ್ಳಿ ಬಳಿ ನಡೆದಿದೆ.
ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಕುಪ್ಪೆ ಗೇಟ್ನ ದೊಂಬಿದಾಸ್ ಕಾಲೊನಿಯ ವೆಂಕಟೇಶ್ (50 ವರ್ಷ) ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ಕಾಲೋನಿಯ ಸುನಿಲ್ ಹಾಗೂ ಇತರರ ನಡುವೆ ಗ್ರಾಮದ ಜಮೀನಿನ ವಿಚಾರದಲ್ಲಿ ಗಲಾಟೆಯಾಗಿತ್ತು. ಈ ಸಂಬಂಧ ವೆಂಕಟೇಶ್ ಅವರು ಸುನೀಲ್ ಹಾಗೂ ಇತರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಇನ್ನು ಸುನೀಲ್ ಜಾಮೀನಿನ ಮೇಲೆ ಹೊರ ಬಂದಿದ್ದರು. ನವೆಂಬರ್ 03 ರಂದು ಹುಣಸೂರಿನ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯಿತ್ತು. ಹೀಗಾಗಿ ನ್ಯಾಯಾಲಯಕ್ಕೆ ವೆಂಕಟೇಶ್ ಮತ್ತು ಸುನೀಲ್ ಇಬ್ಬರು ಹಾಜರಾಗಿದ್ದರು. ಸಂಜೆ ನ್ಯಾಯಾಲಯಕ್ಕೆ ಹಾಜರಾಗಿ ಗ್ರಾಮಕ್ಕೆ ಹಿಂತಿರುಗುವಾಗ ಮೈಸೂರು - ಮಡಿಕೇರಿ ಹೆದ್ದಾರಿಯ ಸೋಮನಹಳ್ಳಿ ಬಳಿ ವೆಂಕಟೇಶ್ ನನ್ನು ಸುನೀಲ್ ಅಡ್ಡಗಟ್ಟಿದ್ದಾರೆ. ಬಳಿಕ ವೆಂಕಟೇಶ್ ತಾನು ತಂದಿದ್ದ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.
ಸುನೀಲ್ ಮಚ್ಚಿನಿಂದ ಹಲ್ಲೆ ನಡೆಸುತ್ತಿದ್ದರು ವೆಂಕಟೇಶ್ ಸಹಾಯಕ್ಕೆ ಯಾರು ಬರಲಿಲ್ಲ. ವೆಂಕಟೇಶ್ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಹೆದ್ದಾರಿಯಲ್ಲಿದ್ದ ಸಾರ್ವಜನಿಕರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ವೆಂಕಟೇಶ್ನ್ನು ಮೈಸೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದು, ಈ ಸಂಬಂಧ ಹುಣಸೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ತಾಯಿಗೆ ಬೈದಿದ್ದನ್ನು ಪ್ರಶ್ನಿಸಿದ ಸಹೋದರರ ಹಣೆಗೆ ಗನ್ ಇಟ್ಟು ಮನಸೋ ಇಚ್ಛೆ ಹಲ್ಲೆ