ನಂಜನಗೂಡು: ಪಟ್ಟಣದಲ್ಲಿ ಒಂದೇ ದಿನ ಐವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ.
ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿರುವ ಜುಬುಲಿಯಂಟ್ ಔಷಧಿ ಕಾರ್ಖಾನೆಯಲ್ಲಿ ಕಳೆದ 2 ದಿನಗಳ ಹಿಂದೆ ನೌಕರನೊಬ್ಬನಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಅವರ ಜೊತೆ ಇದ್ದ 7 ಜನರನ್ನು ಕ್ವಾರಂಟೈನ್‌ಗೊಳಪಡಿಸಲಾಗಿತ್ತು. ಅದರಲ್ಲಿ 5 ಜನರಿಗೆ ಕೊರೊನಾ ಪಾಸಿಟಿವ್ ಇದೆ. ಅವರಲ್ಲಿ ನಾಲ್ವರು ನಂಜನಗೂಡಿನ ನಿವಾಸಿಗಳಾಗಿದ್ದಾರೆ. ಮತ್ತೊಬ್ಬರು ಮೈಸೂರಿನ ಹೊರ ವಲಯದ ಹಳ್ಳಿಯ ನಿವಾಸಿಯಾಗಿದ್ದಾರೆ.
ಈವರೆಗೆ ಮೈಸೂರು ಜಿಲ್ಲೆಯಲ್ಲಿ 8 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಅವರಿಗೆಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಜನರು ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ ನೀಡಿದ್ದಾರೆ.
ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 925 ಜನರನ್ನು ಅವರವರ ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿರಲು ಸೂಚಿಸಲಾಗಿದೆ. ಕಾರ್ಖಾನೆಗೆ ರಜೆ ಘೋಷಿಸಲಾಗಿದೆ. ಇನ್ನು ನಂಜನಗೂಡಿಗೆ ಹೋಗುವ ಹಾಗೂ ಬರುವ ಎಲ್ಲಾ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.