ಮೈಸೂರು: ಆಷಾಢ ಶುಕ್ರವಾರದ ಪ್ರಯುಕ್ತ ನಾಡ ಅಧಿದೇವತೆಯ ಪ್ರಸಾದವಾಗಿ ಲಡ್ಡು ತಯಾರಿಕೆ ಭರದಿಂದ ಸಾಗಿದೆ. ಇಲ್ಲಿನ ಜೆಪಿ ನಗರದ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಹಾಗೂ ಸ್ನೇಹಿತರಿಂದ ಲಾಡುಗಳು ತಯಾರಾಗುತ್ತಿವೆ.
ಮೊದಲನೇ ಆಷಾಢ ಶುಕ್ರವಾರದಂದು ಸಿಹಿ ವಿತರಿಸಲು ಸೇವಾ ಸಮಿತಿಯವರು ಸೋಮವಾರ ಬೆಳಗ್ಗೆಯಿಂದಲೇ ಲಾಡು ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಚಾಮುಂಡೇಶ್ವರಿ ಬೆಟ್ಟದಲ್ಲಿ ನಡೆಯುವ ವಿಶೇಷ ಪೂಜಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರಿಗೆಂದು ಲಾಡನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ. ಪ್ರತಿ ವರ್ಷ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಸಮಿತಿಯಿಂದ ಲಾಡು ವಿತರಿಸುವ ಸಂಪ್ರದಾಯ ಕಳೆದ 16 ವರ್ಷಗಳಿಂದ ನಡೆಯುತ್ತಿದೆ. ಅದರಂತೆ ಈ ಬಾರಿಯೂ ಲಾಡು ಪ್ರಸಾದ ತಯಾರಿಸಲಾಗುತ್ತಿದೆ.
ಕಳೆದ 28 ವರ್ಷಗಳಿಂದ ಚಾಮುಂಡೇಶ್ವರಿ ದೇವಿಗೆ ವಿಶೇಷ ಹೂವಿನ ಅಲಂಕಾರ, 16 ವರ್ಷಗಳಿಂದ ಪ್ರಸಾದ ವಿತರಿಸುತ್ತಾ ಬರಲಾಗಿದೆ. ಈ ಬಾರಿ 30 ಮಂದಿ ಬಾಣಸಿಗರಿಂದ 35 ಸಾವಿರ ಲಾಡುಗಳು ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಾಗಿವೆ.