ಮೈಸೂರು: ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 30 ಎಮ್ಮೆಗಳನ್ನು ಎಚ್.ಡಿ.ಕೋಟೆ ಚೆಕ್ ಪೋಸ್ಟ್‌ನಲ್ಲಿ ವಶಪಡಿಸಿಕೊಳ್ಳಲಾಗಿದೆ. ನಿಗದಿತ ಪ್ರಮಾಣಕ್ಕಿಂತಲೂ ಮಿತಿ ಮೀರಿ ಎಮ್ಮೆಗಳನ್ನು ತುಂಬಿದ್ದ ವಾಹನವನ್ನು ಪೊಲೀಸರು ಗುರುತಿಸಿ ಕ್ರಮ ಕೈಗೊಂಡಿದ್ದಾರೆ.
ಶನಿವಾರ ಬೆಳಗ್ಗೆ ಹ್ಯಾಂಡ್ ಪೋಸ್ಟ್‌ನಲ್ಲಿ ಸಿಕ್ಕಿಬಿದ್ದ ಎಮ್ಮೆ ಸಾಗಿಸುತ್ತಿದ್ದ ವಾಹನವನ್ನು
ಸಂಜೆಯ ತನಕ ವಶಕ್ಕೆ ಪಡೆದುಕೊಂಡಿದ್ದರೂ ಮಾಹಿತಿ ಹೊರಬಂದಿರಲಿಲ್ಲ. ಹೈದರಾಬಾದ್‌ನಿಂದ ಕೇರಳಕ್ಕೆ ಫಾರಂನಲ್ಲಿ ಪೋಷಣೆ ಮಾಡಲು ಎಮ್ಮೆ ಸಾಗಿಸುತ್ತಿರುವ ದಾಖಲೆ ಸಿದ್ದಪಡಿಸಲಾಗಿತ್ತು. ಸಾಗಣೆ ಮಾಡುತ್ತಿದ್ದ ಎಮ್ಮೆಗಳ ಪೈಕಿ ಬೆರಳೆಣಿಕೆಯಷ್ಟು ಕೆಲವು ಎಮ್ಮೆಗಳಿಗೆ ಮಾತ್ರ ಓಲೆ ಹಾಕಿದ್ದು, ಇನ್ನುಳಿದ ಎಮ್ಮೆಗಳಿಗೆ ಕೋಟೆ ಪಶುವೈದ್ಯರಿಂದ ರಾತ್ರಿ ಓಲೆ ಅಳವಡಿಕೆ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹೆಚ್.ಡಿ.ಕೋಟೆ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಶನಿವಾರ ರಾತ್ರಿ ಸಾರ್ವಜನಿಕರ ಸಮ್ಮುಖದಲ್ಲಿ ಎಮ್ಮೆಗಳ ಆರೋಗ್ಯ ತಪಾಸಣೆ ನಡೆಸಿದ ವೈದ್ಯರ ತಂಡ ಓಲೆ ಹಾಕಿದೆ. ಕ್ರಿಸ್ ಮಸ್ ಹಬ್ಬದ ಅಂಗವಾಗಿ ಮಾಂಸಕ್ಕಾಗಿ ಕೇರಳಕ್ಕೆ ಇವುಗಳನ್ನು ಸಾಗಿಸಲಾಗುತ್ತಿತ್ತು ಎಂದು ಸ್ಥಳೀಯ ರೈತರು ಹೇಳಿದ್ದಾರೆ. ಆದರೆ ಸಾಗಣೆ ಮಾಡುತ್ತಿರುವ ಎಮ್ಮೆಗಳೂ ಪ್ರಭಾವಿ ವ್ಯಕ್ತಿಗೆ ಸೇರಿದ್ದು, ಅವರ ಶಿಪಾರಸಿನ ಮೇಲೆ ಎಮ್ಮೆಗಳ ಸಾಗಣೆ ಅಧಿಕೃತಪಡಿಸಿಕೊಳ್ಳಲಾಗುತ್ತಿದೆ ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ.
ಎಮ್ಮೆ ಅಕ್ರಮ ಸಾಗಣೆಗೆ ವಿರೋಧ: ಗೋಹತ್ಯೆ ನಿಷೇಧವಿದ್ದರೂ ಜಿಲ್ಲೆಯಿಂದ ಹಲವಾರು ಗೋ ಅಥವಾ ಎಮ್ಮೆಗಳನ್ನು ಕೇರಳ ಕಸಾಯಿಖಾನೆಗೆ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ. ಎಷ್ಟೋ ರೈತರಿಂದ ಕಡಿಮೆ ಬೆಲೆಗೆ ಹಸು ಹಾಗೂ ಎಮ್ಮೆಗಳನ್ನು ಅಕ್ರಮವಾಗಿ ಖರೀದಿಸುವ ದಲ್ಲಾಳಿಗಳು, ವಾಹನಗಳ ಮೂಲಕ ಕೇರಳ ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಹಲವು ಸಂಘಟನೆಗಳು ಒತ್ತಾಯಿಸಿದರೂ, ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ವಿವಿಧ ಸಂಘಟನೆಗಳು ಆರೋಪಿಸಿವೆ.
ಮಾಂಸಕ್ಕೆ ಬೇಡಿಕೆ ಹೆಚ್ಚಾದಂತೆ ಕೇರಳ, ಗೋವಾ ರಾಜ್ಯದ ಕಸಾಯಿಖಾನೆಗಳು ಕರ್ನಾಟಕದಲ್ಲಿ ಕಡಿಮೆ ಬೆಲೆಗೆ ಸಿಗುವ ಜಾನುವಾರುಗಳನ್ನು ದಲ್ಲಾಳಿಗಳಿಂದ ಖರೀದಿಸುತ್ತಿವೆ. ಕಸಾಯಿಖಾನೆ ದಲ್ಲಾಳಿಗಳು ರೈತರೊಂದಿಗೆ ನೇರ ಸಂಪರ್ಕ ಸಾಧಿಸಿ, ಕಡಿಮೆ ಬೆಲೆಗೆ ಎಮ್ಮೆ ಅಥವಾ ಜಾನುವಾರುಗಳನ್ನು ಕೊಂಡುಕೊಂಡು, ಕೇರಳ ಗೋವಾಗೆ ಸಾಗಿಸುತ್ತಿದ್ದಾರೆ. ಈ ದಂದೆ ಶತಮಾನಗಳಿಂದ ನಡೆಯುತ್ತಿದ್ದರೂ ಗೋಹತ್ಯೆ ನಿಷೇಧ ಬಳಿಕವೂ ಇಂಥ ಘಟನೆಗಳು ಮುಂದುವರಿಯುತ್ತಿರುವುದು ಗೋ ಪ್ರಿಯರಲ್ಲಿ ಅಸಮಾಧಾನ ಉಂಟುಮಾಡಿದೆ.
ಜಾನುವಾರು ಸಾಕಲು ಹಿಂದೇಟು: ಇಂದಿನ ದಿನಗಳಲ್ಲಿ ಪಶು ಆಹಾರ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೈತ ವರ್ಗ ಹೈನುಗಾರಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಹೆಚ್ಚು ಹಸು, ಎಮ್ಮೆಗಳನ್ನು ಸಾಕಲು ಹಿಂಜರಿಯುತ್ತಿದ್ದಾರೆ. ಅದರಂತೆ ಕೃಷಿಯಲ್ಲಿ ಈಗ ನೂತನ ತಂತ್ರ ಅಭಿವೃದ್ಧಿಯಾದಂತೆ ರೈತ ಸಮುದಾಯ ಉಳುಮೆಗೂ ಜಾನುವಾರು ಬಳಕೆಯನ್ನು ಕಡಿಮೆ ಮಾಡಿದ್ದಾರೆ. ಇದರಿಂದ ಮನೆಯಲ್ಲಿ ನಿರ್ವಹಿಸಲೂ ಸಾಧ್ಯವಾಗದೇ, ಹೆಚ್ಚಾದ ಅಥವಾ ವಯಸ್ಸಾದ ಜಾನುವಾರುಗಳನ್ನು ದಲ್ಲಾಳಿಗಳಿಗೆ ಮಾರುವುದು ಸಹಜವಾಗಿದೆ.
ಇದನ್ನೂಓದಿ: ಕೈ ಮುಖಂಡನ ಮೇಲೆ ದಾಳಿ ಯತ್ನ: ಮೂವರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು