ಮೈಸೂರು: ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಬಾರಿ ರಾಷ್ಟ್ರದಲ್ಲಿ ಮೋದಿ ಅಲೆ ಇದೆ ಎಂದು ಬಿಂಬಿಸಲಾಗುತ್ತಿದೆ. ಅದು ಸುಳ್ಳು. ಹಾಗೇನಾದರೂ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ಕೋಮುವಾದಿಗಳನ್ನು ದೂರವಿಡಲು ಈ ಮೈತ್ರಿ ಮಾಡಿಕೊಳ್ಳಲಾಗಿದೆ. ನಡೆಯುತ್ತಿರುವ ಲೋಕಸಭಾ ಚುನಾವಣಾ ಕದನದಲ್ಲಿ ಈ ಬಾರಿ ನಾವು 14 ಸ್ಥಾನ ಗೆಲ್ಲುವುದು ಖಚಿತ. ಬೇಕಿದ್ದರೆ ನಿಮ್ಮ ಡೈರಿಯಲ್ಲಿ ಬರೆದಿಟ್ಟುಕೊಳ್ಳಿ ಎಂದು ಸವಾಲು ಹಾಕಿದರು.
ಬಿಜೆಪಿ ನಾಯಕರು ರಾಮನ ಭಜನೆ ಬಿಟ್ಟು ಇದೀಗ ಮಾಜಿ ಪ್ರಧಾನಿ ದೇವೇಗೌಡರ ಭಜನೆ ಶುರುವಿಟ್ಟುಕೊಂಡಿದ್ದಾರೆ. ದೇವೇಗೌಡರೆಂದರೆ ಅವರಿಗೆ ಭಯ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನು ಮಾಧ್ಯಮದವರ ಮೇಲೆ ಹಲ್ಲೆ ನಡೆದರೆ ನಾನು ಜವಾಬ್ದಾರನಲ್ಲ ಎಂಬ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ಮಾಧ್ಯಮದವರ ಮೇಲೆ ಹಲ್ಲೆ ನಡೆಸಲು ಬಿಜೆಪಿ ಟೀಂ ತಯಾರಿದೆ ಎಂದು ಹೊಸ ಬಾಂಬ್ ಸಿಡಿಸಿದರು.
ಇನ್ನು ಜ್ಯೋತಿಷ್ಯವನ್ನು ಹೆಚ್ಚಾಗಿ ನಂಬುವ ರೇವಣ್ಣ ಅವರು, 22,6,8 ನಮಗೆ ಲಕ್ಕಿ. ಇದೇ 18 ರಂದು ಚುನಾವಣೆ ನಡೆಯುತ್ತಿದೆ. ಈ ನಂಬರ್ ಕೂಡ ನಮಗೆ ಲಕ್ಕಿಯಾಗಿದೆ. ಹಾಗಾಗಿ ಈ ಸಾರಿ ನಾವು 14 ಸ್ಥಾನಗಳನ್ನು ಗೆಲ್ಲುವುದು ಶತಸಿದ್ಧ ಎಂದು ಜ್ಯೋತಿಷ್ಯದ ಲೆಕ್ಕ ಒಪ್ಪಿಸಿದರು.