ಮೈಸೂರು: ಎರಡು ಬಾರಿ ಸ್ವಚ್ಛ ನಗರಿ ಪ್ರಶಸ್ತಿ ಪಡೆದಿರುವ ಸಾಂಸ್ಕೃತಿಕ ನಗರಿ ಈ ಬಾರಿ ಹ್ಯಾಟ್ರಿಕ್ ಸಾಧಿಸಬೇಕು ಎಂಬ ಛಲದೊಂದಿಗೆ ಈಗಾಗಲೇ ನಗರದಲ್ಲಿ ಸ್ವಚ್ಛ ಸರ್ವೇಕ್ಷಣೆಯ ಕೆಲಸ ಶುರು ಮಾಡಿದೆ. ಹಾಗಾದರೆ ಹೇಗೆಲ್ಲಾ ಸಿದ್ಧತೆ ನಡೆಯುತ್ತಿದೆ ಎಂಬ ಬಗ್ಗೆ ಇಲ್ಲಿದೆ ವಿಶೇಷ ವರದಿ.
ಓದಿ: ಒಂದು ದಿನದ ಮಟ್ಟಿಗೆ ಜಿಪಂ ಸಿಇಒ ಆದ ವಿದ್ಯಾರ್ಥಿನಿ!
ದೇಶದಲ್ಲಿಯೇ ಅರಮನೆಗಳ ನಗರಿ, ಸ್ವಚ್ಛ ನಗರಿ, ಗೋಪುರಗಳ ನಗರಿ, ಸಾಂಸ್ಕೃತಿಕ ನಗರಿ ಎಂಬ ಖ್ಯಾತಿ ಗಳಿಸಿರುವ ಮೈಸೂರು ನಗರವನ್ನು ಯದು ವಂಶದ ರಾಜರು ಬಹಳ ಸುಂದರವಾಗಿ ಕಟ್ಟಿದ್ದಾರೆ. ಇದಕ್ಕೆ ಈಗ ಆಧುನಿಕ ಬದುಕಿನ ರೀತಿ ನೀತಿಗಳು, ನಗರದ ವಿಸ್ತಾರ ಇವೆಲ್ಲಾ ಸ್ವಚ್ಛತೆಗೆ ಸವಾಲ್ ಆಗಿವೆ.
ಈ ನಡುವೆ ಕೇಂದ್ರ ಸರ್ಕಾರ ನಡೆಸುವ ಸ್ವಚ್ಛ ಸರ್ವೇಕ್ಷಣೆ ಈ ಬಾರಿ ಜನವರಿ ತಿಂಗಳಿನಿಂದ ಮಾರ್ಚ್ವರೆಗೆ 3 ತಿಂಗಳ ಕಾಲ ನಡೆಯಲಿದ್ದು, ಇದರಲ್ಲಿ ಸಾರ್ವಜನಿಕರ ಫೀಡ್ಬ್ಯಾಕ್ ಬಹಳ ಮಹತ್ವ ವಹಿಸುತ್ತದೆ. ಕಳೆದ ಬಾರಿ (2020) ಮೈಸೂರು 6000 ಸಾವಿರ ಅಂಕಗಳಲ್ಲಿ 5298.61 ಅಂಕ ಪಡೆದು 5ನೇ ಸ್ಥಾನ ಪಡೆದಿತ್ತು. ಮಧ್ಯಪ್ರದೇಶದ ಇಂದೂರ್ 5647 ಅಂಕ ಪಡೆದು ಮೊದಲ ಸ್ಥಾನ ಪಡೆದರೆ, ಗುಜರಾತ್ನ ಸೂರತ್ 2ನೇ ಸ್ಥಾನ, ಮಹಾರಾಷ್ಟ್ರದ ನವಿ ಮುಂಬೈ 3ನೇ ಸ್ಥಾನ, ಛತ್ತೀಸ್ಘಡದ ಅಂಬಿಕಾಪುರ 4ನೇ ಸ್ಥಾನ ಪಡೆದಿತ್ತು.
ಸ್ವಚ್ಛ ಸರ್ವೇಕ್ಷಣೆ ಏಕೆ?
ಸ್ವಚ್ಛ ಭಾರತ ಅಭಿಯಾನದ ಪ್ರಗತಿಯನ್ನು ಅಳೆಯಲು 2014ರಲ್ಲಿ ಕೇಂದ್ರ ಸರ್ಕಾರ ಮೊದಲ ಬಾರಿಗೆ ಸ್ವಚ್ಛ ಸರ್ವೇಕ್ಷಣೆ ಆರಂಭಿಸಿತು. ಸ್ವಚ್ಛತೆಯನ್ನು ಕಾಪಾಡುವ ದೃಷ್ಟಿಯಿಂದ ನಗರ ಮತ್ತು ಪಟ್ಟಣಗಳಲ್ಲಿ ಪೈಪೋಟಿ ಮನೋಭಾವನೆ ಬೆಳೆಸಲು ಕೇಂದ್ರ ಸರ್ಕಾರ ಪ್ರತೀ ವರ್ಷ ಸ್ವಚ್ಛ ನಗರಗಳ ಶ್ರೇಯಾಂಕ ಪಟ್ಟಿ ಪ್ರಕಟಿಸುತ್ತದೆ.
ಎಷ್ಟು ವಿಭಾಗ ಮತ್ತು ಎಷ್ಟು ಅಂಕಗಳು?
6000 ಸಾವಿರ ಅಂಕಗಳಿಗೆ ನಡೆಯುವ 2021ನೇ ಸಾಲಿನ ಸ್ವಚ್ಛ ಸರ್ವೇಕ್ಷಣೆ ಕಾರ್ಯದಲ್ಲಿ ಮೂರು ವಿಭಾಗಗಳ ಅಂಕಗಳನ್ನು ವಿಂಗಡಿಸಲಾಗುತ್ತದೆ. ಅದರಲ್ಲಿ ಸಾರ್ವಜನಿಕ ಅಭಿಪ್ರಾಯ 1800 ಅಂಕ, ಸೇವಾ ಕಾರ್ಯಕ್ರಮಗಳು 2400 ಅಂಕ ಹಾಗೂ ಸರ್ಟಿಫಿಕೇಟ್ 1000 ಅಂಕ, ಶೌಚಾಲಯ ಹಾಗೂ ನೀರು ಪೂರೈಕೆ ಸೇವೆಗೆ 1800 ಅಂಕಗಳನ್ನು ನಿಗದಿಪಡಿಸಲಾಗಿದೆ.
ಸಾರ್ವಜನಿಕರ ಪಾತ್ರ ಏನು?
ಸ್ವಚ್ಛ ನಗರಿ ಪಟ್ಟ ಪಡೆಯಲು ಸಾರ್ವಜನಿಕರ ಪಾತ್ರ ಮುಖ್ಯ. ಏಕೆಂದರೆ ಸಿಟಿಜನ್ ಫೀಡ್ಬ್ಯಾಕ್ನಲ್ಲಿ ಭಾಗವಹಿಸಬೇಕು. ಸ್ವಚ್ಛತಾ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಸ್ವಚ್ಛತೆ, ತ್ಯಾಜ್ಯ ಸಂಸ್ಕರಣೆಗೆ ಹೊಸ ವಿಧಾನಗಳನ್ನು ಪರಿಚಯಿಸಬೇಕು. ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಬೇಕು. ಜೊತೆಗೆ ಸ್ವಚ್ಛ ನಗರಿ ಪಟ್ಟ ಪಡೆಯಲು ಸಾರ್ವಜನಿಕರ ಫೀಡ್ಬ್ಯಾಕ್ ಮುಖ್ಯ. ಈ ಬಾರಿ ಸ್ವಚ್ಛ ನಗರಿ ಸ್ವಚ್ಛ ಸರ್ವೇಕ್ಷಣೆ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ಮಾಡಿಕೂಳ್ಳಲಾಗಿದೆ.
2015 ಮತ್ತು 2016ರಲ್ಲಿ ಸ್ವಚ್ಛ ನಗರಿ ಮೊದಲ ಸ್ಥಾನ ಪಡೆದಿದ್ದು, ಕಳೆದ ವರ್ಷ 5ನೇ ಸ್ಥಾನ ಪಡೆಯಲಾಗಿತ್ತು. ಆದರೆ ಈ ಬಾರಿ ಮೂರು ತಿಂಗಳ ಕಾಲ ಕಾಲವಕಾಶವಿದೆ. ಇದಕ್ಕಾಗಿ ಈಗಾಗಲೇ ಕೆಲಸ ಆರಂಭಿಸಲಾಗಿದೆ. ಶೌಚಾಲಯಗಳ ನಿರ್ವಹಣೆ, ಇ-ಶೌಚಾಲಯ ನಿರ್ವಹಣೆ, ಸಿಟಿಜನ್ ಫೀಡ್ಬ್ಯಾಕ್ ವ್ಯವಸ್ಥೆ, ಇದಕ್ಕಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲರ ಸಹಕಾರದಿಂದ ಈ ಬಾರಿ ಸ್ವಚ್ಛ ನಗರಿ ನಂಬರ್ ಒನ್ ಪಟ್ಟ ಪಡೆಯಲು ತಯಾರಿ ಆರಂಭಿಸಿದ್ದೇವೆ ಎನ್ನುತ್ತಾರೆ ಪಾಲಿಕೆಯ ಆಯುಕ್ತ ಗುರುದತ್ತ ಹೆಗಡೆ.