ಮೈಸೂರು: 2000 ರೂಪಾಯಿಗೆ ಚಿಲ್ಲರೆ ಕೇಳಿದ ವ್ಯಕ್ತಿಗೆ ಅಂಗಡಿ ಮಾಲೀಕ ಹಿಗ್ಗಾಮುಗ್ಗ ಥಳಿಸಿದ ಘಟನೆ ಬಿಳಿಕೆರೆಯಲ್ಲಿ ನಡೆದಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹೆಚ್.ಡಿ. ಕೋಟೆಯ ಹಳ್ಳದಮನುಗನಹಳ್ಳಿ ನಿವಾಸಿ ಉಮೇಶ್ ಎಂಬಾತ ಕಾರ್ಯನಿಮಿತ್ತ ಬಿಳಿಕೆರೆ ಗ್ರಾಮಕ್ಕೆ ಬಂದಿದ್ದ. 2000 ರೂಪಾಯಿಗೆ ಚಿಲ್ಲರೆ ತೆಗೆದುಕೊಳ್ಳಲು ಬಾರ್ ಒಂದಕ್ಕೆ ಹೋಗಿ ಕೇಳಿದ್ದಾನೆ. ಅಲ್ಲಿ ಚಿಲ್ಲರೆ ಸಿಗದಿದ್ದಕ್ಕೆ ಪಕ್ಕದಲ್ಲೇ ಇದ್ದ ಚಿಲ್ಲರೆ ಅಂಗಡಿಗೆ ಬಂದು ಚಿಲ್ಲರೆ ಕೇಳಿದ್ದಾನೆ. ಟೆನ್ಷನ್ನಲ್ಲಿದ್ದ ಅಂಗಡಿ ಮಾಲೀಕ ಸಚಿನ್, ಉಮೇಶನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಹಲ್ಲೆ ನಡೆಯುತ್ತಿದ್ದರು ಸಾರ್ವಜನಿಕರು ಈತನ ನೆರವಿಗೆ ಬಂದಿಲ್ಲ. ಬದಲಾಗಿ ಹಲ್ಲೆಗೊಳಗಾದ ವ್ಯಕ್ತಿಯ ಮೊಬೈಲ್ಅನ್ನು ಯುವಕನೊಬ್ಬ ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಉಮೇಶ್ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಮೇಶ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಆಸ್ಪತ್ರೆಯ ವೆಚ್ಚವನ್ನು ಭರಿಸಲಾಗದೆ ಕುಟುಂಬಸ್ಥರು ಆಸ್ಪತ್ರೆಯ ಮುಂಭಾಗದಲ್ಲಿ ದಾನಿಗಳ ಸಹಾಯಕ್ಕಾಗಿ ಕಣ್ಣೀರಿಡುತ್ತಿದ್ದಾರೆ.