ಮಂಡ್ಯ: ಕೊರೊನಾ ಸೋ೦ಕಿತ ರೋಗಿಗಳ ಚಿಕಿತ್ಸೆಗೆ ಅವಶ್ಯವಿದ್ದಲ್ಲಿ ಬೆಂಗಳೂರಿನ ಆದಿಚು೦ಚನಗಿರಿ ಆಸ್ಪತ್ರೆಗಳು ಮತ್ತು ಹಾಸ್ಟೆಲ್‌ಗಳನ್ನು ಬಿಟ್ಟುಕೊಡಲು ಶ್ರೀಮಠ ಸಿದ್ಧವಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ನಾಗಮಂಗಲ ತಾಲೂಕಿನ ಬಿ.ಜಿ. ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೊರೊನಾ ಸೋಂಕಿತ ರೋಗಿಗಳ ಆರೋಗ್ಯವನ್ನು ಶ್ರೀಗಳು ವಿಚಾರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಜನರನ್ನು ಕಾಡಿದ್ದ ಕೊರೊನಾ ಮಹಾಮಾರಿ ಈಗ 2ನೇ ಅಲೆಯಾಗಿ ಬಂದು ವಿಚಿತ್ರ ರೂಪತಾಳಿ ಜನರ ನೆಮ್ಮದಿ ಕೆಡಿಸಿದೆ.
ಈ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಸಹ ಬಹಳ ಎಚ್ಚರಿಕೆ ವಹಿಸಬೇಕು. ಸೋಂಕಿತ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಸಲುವಾಗಿ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ 250ರಿಂದ 300 ಹಾಸಿಗೆಗಳನ್ನು ಸಿದ್ಧಪಡಿಸಿ, ಇದಕ್ಕೆ ಬೇಕಾದ ವೆಂಟಿಲೇಟರ್, ಆಕ್ಸಿಜಿನ್ ಸೇರಿದಂತೆ ಅಗತ್ಯವಿರುವ ಎಲ್ಲ ಬಗೆಯ ಸೌಲಭ್ಯಗಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ಯಾವುದೇ ಆತಂಕಕ್ಕೀಡಾಗಬಾರದು. ಕೋವಿಡ್ ಪರೀಕ್ಷೆಗೊಳಪಟ್ಟ ವೇಳೆ ಸೋಂಕು ದೃಢಪಟ್ಟರೆ ಗಾಬರಿಯಾಗದೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬಹುದು. ಮದುವೆ ಇನ್ನಿತರೆ ಶುಭ ಸಮಾರಂಭಗಳಲ್ಲಿ ಸಂಭ್ರಮ ವಿನಿಯೋಗ ಮಾಡಿಕೊಳ್ಳುವ ಭರದಲ್ಲಿ ಖಾಯಿಲೆಗಳನ್ನು ವಿನಿಯೋಗವಾಗಲು ನಾವು ಅವಕಾಶ ಕೊಡಬಾರದು. ನಾವು ಚೆನ್ನಾಗಿದ್ದರೆ ಮುಂದೆ ಎಂತಹ ಸಂಭ್ರಮಗಳನ್ನಾದರೂ ಆಚರಿಸಬಹುದು ಎಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.
ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸುವ ಜೊತೆಗೆ ಪರಸ್ಪರ ದೂರವಿದ್ದು ಕೊರೊನಾ ಸೋಂಕು ನಿಯಂತ್ರಿಸಬೇಕು ಎಂದು ಶ್ರೀಗಳು ಮನವಿ ಮಾಡಿದರು.
ಇದನ್ನೂ ಓದಿ: ಬಿಬಿಎಂಪಿ ಮುಖ್ಯ ಕಾರ್ಯದರ್ಶಿ ಪೂರ್ವ ವಲಯದ ವಾರ್ ರೂಂ ಪರಿಶೀಲನೆ