ಮಂಡ್ಯ: ತಾಯಿಯ ಉತ್ತರಾದಿಕ್ರಿಯೆಯನ್ನು ಬದಿಗೊತ್ತಿ ಕರ್ತವ್ಯಕ್ಕೆ ಹಾಜರಾಗಿದ್ದ ಪುತ್ರ ಅದೇ ದಿನ ಸಾವಿಗೀಡಾದ ಘಟನೆ ಮಳವಳ್ಳಿ ತಾಲೂಕಿನ ಕಂಸಾಗರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವಾಟರ್ ಮನ್ ಸಿದ್ದರಾಜು ಸಾವಿಗೀಡಾದಾತ. ಎಂದಿನಂತೆ ಇಂದು ಬೆಳಗ್ಗೆ ಗ್ರಾಮಕ್ಕೆ ನೀರು ಸರಬರಾಜು ಮಾಡಲು ಟ್ಯಾಂಕ್ ಬಳಿ ತೆರಳಿದ್ದಾಗ ವಿದ್ಯುತ್ ತಂತಿ ತಗುಲಿ ಅವರು ಸಾವಿಗೀಡಾಗಿದ್ದಾರೆ. ಇಂದು ಸಿದ್ದರಾಜು ತಾಯಿ ಕೆಂಪಮ್ಮನವರ ಉತ್ತರ ಕ್ರಿಯೆ ಕಾರ್ಯವಿತ್ತು.
ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಪಂಚಾಯಿತಿ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮಳವಳ್ಳಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.