ಮಂಡ್ಯ: ಸ್ಮಶಾನ ಜಾಗವನ್ನು ಕಬ್ಜಾ ಮಾಡಿ ಶವ ಹೂಳಲು ಅಡ್ಡಿಪಡಿಸಲಾಗುತ್ತಿದೆ ಎಂದು ಆರೋಪಿಸಿ, ಶ್ರೀರಂಗಪಟ್ಟಣ ತಾಲೂಕಿನ ಕಾರೇಕುರ ಗ್ರಾಮಸ್ಥರು ತಹಶೀಲ್ದಾರ್ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು.
ಐದಾರು ದಶಕಗಳಿಂದ ಅಂತ್ಯಸಂಸ್ಕಾರ ನಡೆಸುತ್ತಿದ್ದ ಇಲ್ಲಿನ ಬೆಳಗೋಳ ಗ್ರಾಮ ವ್ಯಾಪ್ತಿಯ ಸರ್ವೇ ನಂ.342ರ ಜಾಗವನ್ನು ಥಾಮಸ್ ಮ್ಯಾಥ್ಯೂ ಎಂಬುವರು ಕಬ್ಜಾ ಮಾಡಲು ಮುಂದಾಗಿದ್ದಾರೆ. ಜಾಗ ನನ್ನದು ಎಂದು ಶವ ಹೂಳುವಾಗ ಅಡ್ಡಿ ಪಡಿಸುತ್ತಿದ್ದಾರೆ. ಈ ಸಂಬಂಧ ನ್ಯಾಯಾಲಯ ಮೊರೆ ಹೋಗಿದ್ದ ವೇಳೆ ಗ್ರಾಮಸ್ಥರ ಪರ ತೀರ್ಪು ಬಂದಿತ್ತು. ಇದೀಗ ನ್ಯಾಯಾಲಯದ ತೀರ್ಪಿಗೆ ಆತ ತಡೆಯಾಜ್ಞೆ ತಂದಿದ್ದು, ಶವಸಸ್ಕಾರಕ್ಕೆ ಅಡ್ಡಿಪಡಿಸುತ್ತಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಧಿಕಾರಿಗಳು ಈ ಹಿಂದೆ ಸ್ಮಶಾನ ಜಾಗದ ಸಮಸ್ಯೆ ಇತ್ಯರ್ಥ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಆತನೊಂದಿಗೆ ಶಾಮೀಲಾಗಿ ಬೇರೆ ಜಾಗ ನೀಡುವುದಾಗಿ ಹೇಳುತ್ತಿದ್ದಾರೆ. ಅದೇ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡಲು ಅವಕಾಶ ಕಲ್ಪಿಸಬೇಕೆಂದು ಗ್ರಾಮಸ್ಥರು ತಹಶೀಲ್ದಾರ್ ಅವರನ್ನು ಒತ್ತಾಯಿಸಿದ್ದಾರೆ.