ಮಂಡ್ಯ: ಸದ್ಯ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಎರಡು ಹೆಸರುಗಳು ಅಂದರೆ ಉರಿಗೌಡ ಮತ್ತು ದೊಡ್ಡನಂಜೇಗೌಡ. ಈ ಎರಡು ಹೆಸರು ಕಾಂಗ್ರೆಸ್-ಬಿಜೆಪಿ ನಾಯಕರ ವಾಕ್ ಸಮರಕ್ಕೂ ಕಾರಣವಾಗಿದೆ.
ಉರಿಗೌಡ ಮತ್ತು ದೊಡ್ಡನಂಜೇಗೌಡ ಎಂಬುದು ಕಲ್ಪನೆಯ ಪಾತ್ರ ಎಂದು ಕಾಂಗ್ರೆಸಿನವರು ಹೇಳುತ್ತಿದ್ದರೇ, ಮತ್ತೊಂದೆಡೆ ಟಿಪ್ಪು ಸುಲ್ತಾನ್ ಕೊಂದಿದ್ದೇ ಈ ಇಬ್ಬರು ಎಂದು ಕಮಲ ಕಲಿಗಳು ವಾದಕ್ಕಿಳಿದಿದ್ದಾರೆ. ಈ ಬೆನ್ನಲ್ಲೇ ಉರಿಗೌಡ, ದೊಡ್ಡನಂಜೇಗೌಡರ ದಾಖಲೆ ನೀಡುವಂತೆ ಸಾಹಿತಿ ಜಗದೀಶ್ ಕೊಪ್ಪ ಆಗ್ರಹಿಸಿದ್ದಾರೆ.
ಟಿಪ್ಪು ಸುಲ್ತಾನ್ ಕೊಂದಿದ್ದು ಉರಿಗೌಡ ಮತ್ತು ದೊಡ್ಡನಂಜೇಗೌಡ ಎಂದು ಯಾವಾಗ ಬಿಜೆಪಿ ನಾಯಕರು ಹೇಳಿದರೋ ಆ ಬೆನ್ನಲ್ಲೇ ಈ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದೆ. ಕಮಲ ನಾಯಕರ ಹೇಳಿಕೆಗೆ ತಿರುಗೇಟು ನೀಡುತ್ತಿರುವ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಜಗದೀಶ್ ಕೊಪ್ಪ ದಾಖಲೆ ನೀಡುವಂತೆ ಆಗ್ರಹಿಸಿದ್ದಾರೆ. ಆದರೆ, ಉರಿಗೌಡ ಮತ್ತು ದೊಡ್ಡನಂಜೇಗೌಡ ಇದ್ದರು ಎಂಬ ವಾದವನ್ನು ಕೆಲವು ಸಾಹಿತಿಗಳು ವಿರೋಧಿಸುತ್ತಿದ್ದಾರೆ.
ಶನಿವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಸಾಹಿತಿ ಜಗದೀಶ್ ಕೊಪ್ಪ ಅವರು, ಕಟ್ಟು ಕಥೆಯಿಂದ 3ನೇ ದರ್ಜೆ ರಾಜಕಾರಣ ಮಾಡಿ ಐತಿಹಾಸಿಕ ಹಿನ್ನೆಲೆಯುಳ್ಳ ಮಂಡ್ಯಕ್ಕೆ ಮಸಿ ಬಳಿಯುವ ಕೆಲಸವಾಗುತ್ತಿದೆ. ವಿಶ್ವದಾದ್ಯಂತ ಟಿಪ್ಪು ಬಗ್ಗೆ ರಚಿತವಾಗಿರುವ 600 ಪುಸ್ತಕಗಳಲ್ಲಿ ಈ ಇಬ್ಬರ ಹೆಸರು ಎಲ್ಲು ಉಲ್ಲೇಖವಾಗಿಲ್ಲ. ಸುಳ್ಳು ಇತಿಹಾಸ ಸೃಷ್ಟಿ ಮಾಡಿ ವಿಷ ಕಕ್ಕುತ್ತಿದ್ದಾರೆ. ದಾಖಲೆಗಳಿದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ : ಟಿಪ್ಪು ಇನ್ನೂ ಹೆಚ್ಚು ಕಾಲ ಬದುಕಿದ್ದಿದ್ದರೆ ಹಾಸನವು ಕೈಮಾಬಾದ್ ಆಗಿರುತ್ತಿತ್ತು:ಸಿಟಿ ರವಿ
ಉರಿಗೌಡ, ನಂಜೇಗೌಡ ಇದ್ರೋ, ಇಲ್ಲವೋ ಗೊತ್ತಿಲ್ಲ - ಹೆಚ್ಡಿಕೆ: ಶನಿವಾರ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು, ಒಂದು ಸಮಾಜ, ಇನ್ನೊಂದು ಸಮಾಜವನ್ನು ಅನುಮಾನದಿಂದ ನೋಡುವಂತಾಗಿದೆ. ಬಿಜೆಪಿ ನೈತಿಕತೆ ಉಳಿಸಿಕೊಳ್ಳದೆ ಇದನ್ನ ಎತ್ತಿಕಟ್ಟುತ್ತಿದೆ. ನಿಮಗೆ ನೈತಿಕತೆ ಇಲ್ಲ, ಇದನ್ನ ಕೇಳಿದ್ದು ಯಾರು ನಿಮಗೆ? ಬಾಲಗಂಗಾಧರನಾಥ ಸ್ವಾಮೀಜಿ ಹೆಸರಿದ್ದ ಜಾಗದಲ್ಲಿ, ಇವರಿಬ್ಬರ ಹೆಸರನ್ನು ದ್ವಾರಕ್ಕೆ ಹಾಕಿದ್ದರು. ಯಾರೋ ಆಕ್ಷೇಪ ಎತ್ತಿದ ಬಳಿಕ ತೆಗೆದರು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಉರಿಗೌಡ, ನಂಜೇಗೌಡ ನಮ್ಮ ಹೆಮ್ಮೆ - ಅಶ್ವತ್ಥನಾರಾಯಣ: ಈ ಹಿಂದೆ ಮಂಡ್ಯದ ಕೆ. ಆರ್ ಪೇಟೆಯಲ್ಲಿ ಸಚಿವ ಅಶ್ವತ್ಥನಾರಾಯಣ ಆವರು ಉರಿಗೌಡ ಮತ್ತು ನಂಜೇಗೌಡ ನಮ್ಮ ಅಭಿಮಾನ ಇತಿಹಾಸದಲ್ಲಿ ಉರಿಗೌಡ, ನಂಜೇಗೌಡ ಇದ್ದರು ಎಂಬ ಸಂಪೂರ್ಣ ನಂಬಿಕೆ ನಮ್ಮದು. ಹೀಗಾಗಿ ನಮಗೆ ಅವರಿಬ್ಬರ ಮೇಲೆ ಅಭಿಮಾನವಿದೆ. ಮತಾಂಧನಿಂದ ಮೈಸೂರು ಪ್ರಾಂತ್ಯದ ಜನರನ್ನು ರಕ್ಷಣೆ ಮಾಡಿರುವುದು ನಮಗೆ ಹೆಮ್ಮೆ ಎಂದು ಹೇಳಿದ್ದರು.
ಇದನ್ನೂ ಓದಿ: ಬಿಜೆಪಿಯ ಜನವಿರೋಧಿ ಆಡಳಿತದಿಂದ ಬೇಸತ್ತು "ಕೈ" ಹಿಡಿದಿದ್ದೇನೆ: ಮೋಹನ್ ಲಿಂಬಿಕಾಯಿ