ಮಂಡ್ಯ: ಬೆಂಗಳೂರಲ್ಲಿ ರೌಡಿಗಳು ಲಾಂಗು, ಮಚ್ಚು ಹಿಡಿದು ಅಟ್ಟಹಾಸ ಮೆರೆಯುವ ದೃಶ್ಯಗಳು ಕಂಡುಬರುತ್ತಿರುತ್ತವೆ. ಆದ್ರೆ ಇಂತಹ ಸೀನ್ ಈಗ ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲೂ ನಡೆದಿದ್ದು, ಜನರನ್ನು ಬೆಚ್ಚಿಬೀಳಿಸಿದೆ.
ಮಂಡ್ಯದಲ್ಲೂ ಸಹ ರೌಡಿಗಳ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಇಬ್ಬರು ರೌಡಿಗಳು ಹಾಡಹಗಲೇ ಬಾರ್, ಬೇಕರಿಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಅಲ್ಲದೆ, ವ್ಯಾಪಾರಿಗಳ ಮೇಲೆ ಹಲ್ಲೆ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ರೌಡಿಗಳ ಅಟ್ಟಹಾಸದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೆ.ಆರ್. ಪೇಟೆ ತಾಲೂಕಿನ ಬಂಡಿಹೊಳೆ ಸಮೀಪದ ಚಂದಗೋಳಮ್ಮ ದೇವಾಲಯದ ಬಳಿ ಇರುವ ಬಾರ್ಗೆ ನುಗ್ಗಿದ್ದ ರೌಡಿವೋರ್ವ ಅಲ್ಲಿರುವ ವ್ಯಕ್ತಿಯ ಕುತ್ತಿಗೆಗೆ ಲಾಂಗ್ ಹಿಡಿದು ಬೆದರಿಕೆ ಹಾಕಿದ್ದಾನೆ. ಅಲ್ಲಿ ಮದ್ಯ ಸೇರಿದಂತೆ ಬಾರ್ನಲ್ಲಿದ್ದ ನಗದು ದೋಚಿದ್ದಾನೆ. ಈ ವೇಳೆ ಆತನನ್ನು ತಡೆಯಲು ಅಲ್ಲಿನ ಸಿಬ್ಬಂದಿ ಮುಂದಾದಾಗ ಅವರಿಗೆ ಲಾಂಗ್ ತೋರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬೇಕರಿ ಮಾಲೀಕನ ಮೇಲೆ ಹಲ್ಲೆ:
ಮತ್ತೊಂದೆಡೆ ಮಂಡ್ಯದ ಜೈಲು ವೃತ್ತದ ಬಳಿಯಿರುವ ಬೇಕರಿಗೆ ನುಗ್ಗಿದ್ದ ರೌಡಿವೋರ್ವ ಏಕಾಏಕಿ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿದವನನ್ನು ಕ್ಯಾತಂಗೆರೆಯ ನಾಗೇಶ್ ಎಂದು ಗುರುತಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರೌಡಿಸಂನಲ್ಲಿ ಹೆಸರು ಮಾಡಲು ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಎರಡು ಪ್ರಕರಣಗಳಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿದ್ದು, ಅವರನ್ನು ಮಟ್ಟಹಾಕುವಂತೆ ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.