ಮಂಡ್ಯ: ವಿಜ್ಞಾನ, ತಂತ್ರಜ್ಞಾನ ಮುಂದುವರೆದಿದ್ದರೂ, ದೇಶದ ಬೆನ್ನೆಲುಬಾಗಿರುವ ರೈತರು ಮಾತ್ರ ಇಂದಿಗೂ ಹಳೇ ಪದ್ಧತಿಯಲ್ಲಿಯೇ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ರೈತರಿಗೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಸೋಮವಾರ ಸಕ್ಕರೆನಾಡು ಮಂಡ್ಯದಲ್ಲಿ ಎರಡು ದಿನಗಳ ಕೃಷಿಮೇಳಕ್ಕೆ ಚಾಲನೆ ನೀಡಲಾಯಿತು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಮಂಡ್ಯ ತಾಲೂಕಿನ ವಿಸಿ ಫಾರ್ಂ ಬಳಿ ಇರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಕೃಷಿಮೇಳವನ್ನು ಹಮ್ಮಿಕೊಳ್ಳಲಾಗಿದೆ. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕೃಷಿಮೇಳವನ್ನು ಉದ್ಘಾಟಿಸಿದರು. ಬಿಜಿಎಸ್ ಮಠದ ನಿರ್ಮಲಾನಂದ ಸ್ವಾಮೀಜಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಹಲವರು ಕೃಷಿಮೇಳದಲ್ಲಿ ಭಾಗವಹಿಸಿದರು.
ಕೃಷಿಮೇಳ ಉದ್ಘಾಟಿಸಿ ಮಾತನಾಡಿದ ಸಚಿವ, "ನಮ್ಮ ನಾಡು ರೈತರ ನಾಡು, ನಮ್ಮ ರೈತ ದೇಶದ ಬೆನ್ನೆಲುಬು. ರೈತರು ಕೃಷಿಯಲ್ಲಿ ಅಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು, ಉತ್ತಮ ಲಾಭ ಪಡೆಯಬೇಕು. ನಮ್ಮ ಮೇಲೆ ಕರುಣೆ ತೋರುತ್ತಿದ್ದ ಪ್ರಕೃತಿ ಕೂಡ ಈಗ ಬದಲಾಗಿದೆ. ಯಾವುದೇ ಕಾಲದ ಕೃಷಿ ಪದ್ಧತಿಯನ್ನು ಅಳವಡಿಸಕೊಂಡರೂ, ರೈತರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ." ಎಂದು ಹೇಳಿದರು.
"ಮಂಡ್ಯದ ರೈತರೆಂದರೆ ರಾಜ್ಯದೆಲ್ಲೆಡೆ ಒಂದು ಬಿರುದು ಇದೆ. ಮಂಡ್ಯದ ರೈತರು ಹೊಸ ಹೊಸ ಕೃಷಿ ಪದ್ಧತಿಗಳನ್ನು ಹೆಚ್ಚು ಹೆಚ್ಚು ಅಳವಡಿಸಿಕೊಂಡಿದ್ದಾರೆ. ಆ ಬಿರುದನ್ನು ಬೇರೆಯವರು ತೆಗೆದುಕೊಳ್ಳುವ ಮುನ್ನ ಕೃಷಿಯಲ್ಲಿ ನಾವು ಮುಂದೆ ಸಾಗಬೇಕು. ಕಡಿಮೆ ನೀರು ಬಳಸಿ ಹೆಚ್ಚು ಇಳುವರಿ ಪಡೆಯುವಂತಹ ಪದ್ಧತಿಗಳನ್ನು ಅಳವಡಿಸಿಕೊಳ್ಳಿ. ಕೃಷಿ ಇಲಾಖೆ ಇದೆ. ಅವರು ಸಂಪೂರ್ಣ ಮಾಹಿತಿ ನೀಡುತ್ತಾರೆ. ಸಂಶೋಧಕರು ರೈತರ ಜೊತೆ ಹೋಗಿ, ಮಾರ್ಗದರ್ಶನ ನೀಡಬೇಕು. ಸರ್ಕಾರ ಯಾವತ್ತೂ ರೈತರ ಜೊತೆಗಿರುತ್ತದೆ" ಎಂದು ಅಭಯ ನೀಡಿದ್ರು.
ರೈತರಿಗೆ ಸಮಗ್ರ ಮಾಹಿತಿ: ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರತಿ ವರ್ಷ ಕೃಷಿಮೇಳವನ್ನು ಆಯೋಜನೆ ಮಾಡಿಕೊಂಡು ಬರಲಾಗಿದೆ. ಮಂಡ್ಯ ಜಿಲ್ಲೆಯ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೇಳದಲ್ಲಿ ಕೃಷಿ, ತೋಟಗಾರಿಗೆ ಬೆಳೆಗಳಿಗೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ನೀಡಲಾಗುತ್ತದೆ. ಅಲ್ಲದೆ ಕೃಷಿಯಲ್ಲೂ ಯಾವ ರೀತಿ ತಂತ್ರಜ್ಞಾನವನ್ನು ರೈತರು ಬಳಸಿಕೊಂಡು ಹೆಚ್ಚುವರಿ ಬೆಳೆಗಳನ್ನು ಬೆಳೆಯಬಹುದು ಎಂಬ ಬಗ್ಗೆಯೂ ರೈತರಿಗೆ ತಿಳಿಸಿಕೊಡಲಾಯಿತು. ಬಗೆಬಗೆಯ ಬಿತ್ತನೆ ಬೀಜಗಳ ಬಗ್ಗೆ ಸೇರಿ ಕೃಷಿಮೇಳದಲ್ಲಿ ರೈತರಿಗೆ ಸಮಗ್ರ ಮಾಹಿತಿ ನೀಡಲಾಯಿತು. ಇನ್ನು ಕೃಷಿಮೇಳಕ್ಕೆ ಹತ್ತಾರು ಶಾಲೆಯ ಮಕ್ಕಳು ಭೇಟಿ ನೀಡಿ, ಕೃಷಿ ಬಗ್ಗೆ ಮಾಹಿತಿ ಪಡೆದುಕೊಂಡರು.
ಇದನ್ನೂ ಓದಿ: ಜಿಕೆವಿಕೆ ಕೃಷಿಮೇಳ: ರೈತ ಸ್ನೇಹಿ ಪರ್ಯಾಯ ಮೂರು ತಳಿಗಳ ಪರಿಚಯ