ಮಂಡ್ಯ/ಚಾಮರಾಜನಗರ: ಭಾರಿ ಬಿರುಗಾಳಿಗೆ ವಿದ್ಯುತ್ ಕಂಬಗಳು, ಈಚಲು ಮರಗಳು ಮುರಿದು ಬಿದ್ದು, ವಾಹನ ಸಂಚಾರಕ್ಕೆ ತಡೆ ಉಂಟಾದ ಘಟನೆ ಪಾಂಡವಪುರ ಪಟ್ಟಣದ ಕೆಆರ್ಎಸ್ ರಸ್ತೆಯಲ್ಲಿ ನಡೆದಿದೆ.
ಸಂಜೆ ಬೀಸಿದ ಬಿರುಗಾಳಿ ಹಿನ್ನೆಲೆಯಲ್ಲಿ ಎರಡು ವಿದ್ಯುತ್ ಕಂಬಗಳು ಹಾಗೂ ಈಚಲು ಮರಗಳು ನೆಲಕ್ಕೆ ಉರುಳಿ ಬಿದ್ದಿದ್ದು, ಇದರಿಂದ ಮೈಸೂರು-ಶಿವಮೊಗ್ಗ ಹಾಗೂ ಕೆಆರ್ಎಸ್ ಮಾರ್ಗದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ರೈತ ಸಭಾಂಗಣದ ಮುಂಭಾಗ ಪದೇ ಪದೇ ವಿದ್ಯುತ್ ಕಂಬಗಳು ಬೀಳುತ್ತಿದ್ದರೂ ಸೆಸ್ಕ್ ಇಲಾಖಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹಲವೆಡೆ ಗಾಳಿ ಸಹಿತ ಮಳೆಯಾಗಿದ್ದು, ರೈತರು ಇಳೆ ಹದಗೊಳಿಸಲು ಮುಂದಾಗಿದ್ದಾರೆ. ಗುಂಡ್ಲುಪೇಟೆ ಭಾಗದ ಹಲವೆಡೆ ಸಾಧಾರಣ ಮಳೆಯಾಗಿದ್ದು, ಬಂಡೀಪುರ ಹಾಗೂ ಬಿಳಿಗಿರಿ ರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ಜೋರು ಮಳೆಯಾಗಿದೆ. ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿ ಬಿತ್ತನೆ ಮಾಡಲು ಭೂಮಿ ಹದಗೊಳಿಸಿಕೊಂಡಿರುವ ರೈತರು ಇನ್ನು ಒಂದು ಜೋರು ಮಳೆ ಬಿದ್ದರೆ ಬಿತ್ತನೆ ಕಾರ್ಯಕ್ಕೆ ಮುಂದಾಗಲಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ, ಬಾಚಹಳ್ಳಿ, ಕಣಿಯನಪುರ, ಕಲಿಗೌಡನಹಳ್ಳಿ, ಕುಂದಕೆರೆ, ಕೆಬ್ಬೇಪುರ, ಜಕ್ಕಹಳ್ಳಿಯಲ್ಲಿ ಜೋರು ಮಳೆಯಾಗಿದ್ದು, ಕೆಲವೆಡೆ ಬೀಸಿದ ಭಾರೀ ಗಾಳಿಗೆ ಮನೆ ಛಾವಣಿ ಹಾರಿಹೋದ ಘಟನೆಯು ನಡೆದಿದೆ.