ಮಂಡ್ಯ: ''ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ವರಿಷ್ಠರು ಬರುವುದಿಲ್ಲ ಎಂದಿದ್ದಾರೆ. ಈ ಮೂಲಕ ಸನಾತನ ಧರ್ಮ ವಿರೋಧ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ನಿರ್ಮೂಲನೆ ಆಗಲಿದೆ'' ಎಂದು ಕೇಂದ್ರ ವಿದ್ಯುತ್ ಮತ್ತು ಬೃಹತ್ ಕೈಗಾರಿಕಾ ಸಚಿವ ಕ್ರಿಶನ್ ಪಾಲ್ ಗುರ್ಜರ್ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಗುರುವಾರ ಮನೆ ಮನೆಗೆ ತೆರಳಿ ಮಂತ್ರಾಕ್ಷತೆ ವಿತರಿಸಿ ಮಾತನಾಡಿದ ಅವರು, ''ಕಾಂಗ್ರೆಸ್ ನಾಯಕರಿಗೆ ಆಹ್ವಾನ ಇದ್ದರೂ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂಬ ತೀರ್ಮಾನ ಮಾಡಿದ್ದು, ಅತ್ಯಂತ ದುರ್ದೈವದ ಸಂಗತಿ. ಸನಾತನ ಧರ್ಮವನ್ನು ವಿರೋಧ ಮಾಡುವ ಮೂಲಕ ಕಾಂಗ್ರೆಸ್ ತನ್ನಿಂದ ತಾನೇ ಪತನವಾಗುತ್ತಿದೆ. ಅವರ ವಿನಾಶವನ್ನು ಅವರೇ ಮಾಡಿಕೊಳ್ಳುತ್ತಿದ್ದಾರೆ'' ಎಂದರು.
''ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಬಿಜೆಪಿ ಕಾರ್ಯಕ್ರಮವಲ್ಲ. ಸಾಧು- ಸಂತರ ಕಾರ್ಯಕ್ರಮವಾಗಿದೆ. ಕಾರ್ಯಕ್ರಮಕ್ಕೆ ಬಿಜೆಪಿ ಆಹ್ವಾನಿಸಿಲ್ಲ ಎಂದು ಕಾಂಗ್ರೆಸ್ ಪಕ್ಷದ ವರಿಷ್ಠರು ಹಾಗೂ ನಾಯಕರು ಗೈರಾಗುವುದಾಗಿ ತಿಳಿಸಿದ್ದಾರೆ. ಇದು ನಮ್ಮ ಮನೆಯ ಕಾರ್ಯಕ್ರಮವಲ್ಲ. ಇಡೀ ದೇಶದ ಹಿಂದೂಗಳ ಕಾರ್ಯಕ್ರಮವಾಗಿದೆ. ಆದ್ದರಿಂದ ಕಾಂಗ್ರೆಸ್ ನಾಯಕರನ್ನು ಬಿಜೆಪಿ ನಾಯಕರು ಆಹ್ವಾನಿಸುವ ಅವಶ್ಯಕತೆ ಇಲ್ಲ'' ಎಂದು ಅವರು ಕಿಡಿಕಾರಿದರು.
''ರಾಮ ರಾಜ್ಯ, ರಾಮನ ಕನಸು ನನಸು ಆಗಬೇಕಿದೆ. ಆದರೆ, ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಅಂತಹವರು ಸೇರಿ ಒಂದು ಒಳ್ಳೆಯ ಕೆಲಸಕ್ಕೆ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಮುಂದೆ ಅವರೇ ಪಶ್ಚಾತ್ತಾಪ ಪಡುತ್ತಾರೆ'' ಎಂದು ಹೇಳಿದರು. ''ಹಿಂದೂಗಳನ್ನು ನಿರ್ಲಕ್ಷಿಸಿ ಒಂದು ಕೋಮಿನ ಪರ ನಿಂತಿದ್ದರಿಂದಲೇ ಇತ್ತೀಚೆಗೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿದ್ದಾರೆ'' ಎಂದು ವಾಗ್ದಾಳಿ ನಡೆಸಿದರು.
ಮಂತ್ರಾಕ್ಷತೆ ವಿತರಣೆ: ಇದೇ ವೇಳೆ, ಕಾಂಗ್ರೆಸ್ ಮಾಜಿ ಸಚಿವ ಎಂ ಎಸ್ ಆತ್ಮಾನಂದ ನಿವಾಸಕ್ಕೆ ತೆರಳಿದ ಬಿಜೆಪಿ ನಾಯಕರು ಮಂತ್ರಾಕ್ಷತೆ ಹಾಗೂ ಅಯೋಧ್ಯೆ ಫೋಟೋ ನೀಡಿದರು. ಅದನ್ನು ಸ್ವೀಕರಿಸಿದ ಆತ್ಮಾನಂದ, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ. ಪಿ. ಉಮೇಶ್, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಸಿದ್ದರಾಮಯ್ಯ, ನಗರಸಭೆ ಸದಸ್ಯ ಅರುಣ್‌ಕುಮಾರ್, ಪ. ನಾ. ಸುರೇಶ್, ಸಿ. ಟಿ. ಮಂಜುನಾಥ್ ಇದ್ದರು.
ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಒಳ್ಳೆಯದೇ ಆಗಿದೆ: ''ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಈವರೆಗೂ ಒಳ್ಳೆಯದೇ ಆಗಿದೆಯೇ ಹೊರತು ಕೆಟ್ಟದಾಗಿಲ್ಲ. ಅಂತೆಯೇ ದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್ ಜೊತೆ ಯಾವ ಪಕ್ಷದವರೂ ಕೂಡ ಸೇರುತ್ತಿಲ್ಲ. ಅದರಂತೆ ಏಕಾಂಗಿ ಆಗಿರುವುದರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಎದುರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ'' ಎಂದು ಕೇಂದ್ರ ಇಂಧನ ಮತ್ತು ಬೃಹತ್ ಕೈಗಾರಿಕಾ ಸಚಿವ ಕ್ರಿಶನ್ ಪಾಲ್ ಗುರ್ಜರ್ ಟೀಕಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಮಾತನಾಡಿದ ಅವರು, ''ರಾಜ್ಯ ಸೇರಿದಂತೆ ಇಡೀ ದೇಶಕ್ಕೆ ನರೇಂದ್ರ ಮೋದಿ ಅವರೇ ಗ್ಯಾರಂಟಿ. ಈ ಬಗ್ಗೆ ಜನರಲ್ಲಿ ವಿಶ್ವಾಸವಿದೆ. ಅಂತೆಯೇ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ (ಎನ್‌ಡಿಎ) ಮೈತ್ರಿಕೂಟ ಹೆಚ್ಚು ಸ್ಥಾನವನ್ನು ಗೆಲ್ಲಲಿದೆ. ದೇಶದಲ್ಲಿ ಕೇವಲ ಮೋದಿ ಗ್ಯಾರಂಟಿ ನಡೆಯುತ್ತಿದೆಯೇ ಹೊರತು ಇನ್ಯಾವ ಗ್ಯಾರಂಟಿ ಕೂಡ ನಡೆಯುವುದಿಲ್ಲ. ಕರ್ನಾಟಕದಲ್ಲಿ 28 ಸ್ಥಾನವನ್ನು ಗೆಲ್ಲಲು ಈಗಾಗಲೇ ಟಾರ್ಗೆಟ್ ಮಾಡಿಕೊಂಡಿದ್ದೇವೆ'' ಎಂದರು.
''ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ. ಸಮಯ ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ರಾಜ್ಯ ಮತ್ತು ದೇಶಕ್ಕೆ ಅನುಕೂಲವಾಗಲಿದೆ. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದ ಫಲಿತಾಂಶ ಕರ್ನಾಟಕದಲ್ಲೂ ಮರುಕಳಿಸಲಿದೆ. ಹರಿಯಾಣದಲ್ಲಿ 28 ಸೀಟುಗಳನ್ನು ಗೆದ್ದಂತೆ, ಕರ್ನಾಟಕದಲ್ಲೂ ಕೂಡ ಒಟ್ಟು 28 ಸ್ಥಾನಗಳನ್ನು ಎನ್‌ಡಿಎ ಮೈತ್ರಿಕೂಟ ಗೆಲ್ಲುವ ವಿಶ್ವಾಸವಿದೆ'' ಎಂದರು. ಬಿಜೆಪಿಯ ಅಶೋಕ್ ಜಯರಾಂ, ಡಾ. ಎನ್. ಎಸ್. ಇಂದ್ರೇಶ್ ಹಾಗೂ ಇತರರು ಇದ್ದರು.
ಇದನ್ನೂ ಓದಿ: ಚುನಾವಣಾ ಲಾಭಕ್ಕಾಗಿ ತರಾತುರಿಯಲ್ಲಿ ರಾಮ ಮಂದಿರ ಉದ್ಘಾಟನೆ: ಮಾಜಿ ಸಚಿವ ಹೆಚ್. ಆಂಜನೇಯ