ಮಂಡ್ಯ: ರೆಬಲ್ ಸ್ಟಾರ್ ಅಂಬರೀಶ್ ಅವರ 4ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ ಅಂಬರೀಶ್ ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮಕ್ಕೆ ಆಗಮಿಸಿದ ಸಂಸದೆ ಸುಮಲತಾ ಅಂಬರೀಶ್ ಅವರು ಅಂಬರೀಶ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಸುಮಲತಾ ಅಂಬರೀಶ್ ಅವರು, ಅಜಾತಶತ್ರು ಎನ್ನುವ ಪದಕ್ಕೆ ಸರಿಯಾದ ಅರ್ಥ ಅಂಬರೀಶ್. ಅಂಬರೀಶ್ ಅವರನ್ನು ಮಿಸ್ ಮಾಡಿಕೊಳ್ಳದವರು ಯಾರೂ ಸಹ ಇಲ್ಲ. ಅವರು ನಮ್ಮನ್ನಗಲಿ 4 ವರ್ಷ ಕಳೆದಿದೆ. ಆದರೂ ಅಭಿಮಾನಿಗಳಿಗೆ ಅಂಬಿ ಮೇಲಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ. ಅಂಬಿ ನೆನಪಲ್ಲಿ ಅಭಿಮಾನಿಗಳು ಹಲವಾರು ಜನಪರ ಕೆಲಸ ಮಾಡುತ್ತಿದ್ದಾರೆ. ಅಂಬರೀಶ್ ಎಲ್ಲರನ್ನೂ ಆತ್ಮೀಯತೆಯಿಂದ ಕಾಣುತ್ತಿದ್ದರು. ಹಾಗಾಗಿ ಅವರನ್ನು ಮಿಸ್ ಮಾಡಿಕೊಳ್ಳದವರೇ ಇಲ್ಲ ಎಂದರು.
ಅಭಿಷೇಕ್ ಅಂಬರೀಶ್ ಮದುವೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಕಳೆದ ಮೂರು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಓಡಾಡುತ್ತಿದೆ. ಆದರೆ ಯಾವುದೂ ನಿಜವಲ್ಲ, ಯಾರಾದರೂ ಒಳ್ಳೆ ಹುಡುಗಿ ನಿಮಗೆ ಗೊತ್ತಿದ್ದರೆ ಹೇಳಿ ಮದುವೆ ಮಾಡಿಸೋಣ ಎಂದು ನಗುನಗುತ್ತಲೆ ಹೇಳಿದರು.
ಪ್ರತಿ ವರ್ಷ ಈ ದಿನದಂದು ದೊಡ್ಡರಸಿನಕೆರೆ ಗ್ರಾಮಕ್ಕೆ ಬಂದು ಅಂಬರೀಶ್ ಸಮಾಧಿಗೆ ಸುಮಲತಾ ಅಂಬರೀಶ್ ಅವರು ಪೂಜೆ ಸಲ್ಲಿಸುತ್ತಾರೆ. ಅದರಂತೆ ಇಂದು ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ಇಂದು ಸಹ ಪೂಜೆ ಸಲ್ಲಿಸಿದರು. ಈ ವೇಳೆ, ಸುಮಲತಾಗೆ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ನಟ ದೊಡ್ಡಣ್ಣ ಅವರು ಸಹ ಸಾತ್ ನೀಡಿದರು. ಇದೇ ವೇಳೆ, ದೊಡ್ಡರಸಿನಕೆರೆ ಗ್ರಾಮಸ್ಥರು ಗೀರೈಸ್ ಹಾಗೂ ಚಿಕನ್ ಗ್ರೇವಿಯನ್ನು ಜನರಿಗೆ ವಿತರಣೆ ಮಾಡಿದರು.