ಮಂಡ್ಯ: ಒಂದೇ ಕುಟುಂಬದ ನಾಲ್ವರು ಮಕ್ಕಳು ಸೇರಿದಂತೆ ಐವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವುದಾಗಿ ಎಸ್ಪಿ ಎನ್. ಯತೀಶ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಫೆಬ್ರವರಿ 5 ರಂದು ಕೆ.ಆರ್.ಎಸ್ ಗ್ರಾಮದಲ್ಲಿ ಐವರ ಕೊಲೆಯಾಗಿತ್ತು. ಪ್ರಕರಣದ ತನಿಖೆ ಸಂದರ್ಭದಲ್ಲಿ ದೊರೆತ ಪ್ರಮುಖ ಸಾಕ್ಷಿಯಿಂದ ಮೈಸೂರಿನ ಬೆಲವತ್ತ ಮಹಿಳೆ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ವಿ. ಈ ವೇಳೆ ಆಕೆ ತಪ್ಪನ್ನು ಒಪ್ಪಿಕೊಂಡಿದ್ದಾಳೆ ಎಂದರು.
ಕೊಲೆಯಾಗಿರುವ ಮಹಿಳೆಯ ಗಂಡ ಗಂಗಾರಾಮ್ ಜೊತೆ ಲಕ್ಷ್ಮಿ ಅನೈತಿಕ ಸಂಬಂಧ ಹೊಂದಿದ್ದಾಳೆ. ಹೀಗಾಗಿ, ಮಹಿಳೆ ಮತ್ತು ಮಕ್ಕಳನ್ನು ಕೊಂದರೆ ಗಂಗಾರಾಮ್ ಜೊತೆ ಸಂಸಾರ ಮಾಡಬಹುದು ಎಂಬ ಉದ್ದೇಶದಿಂದ ದುಷ್ಕೃತ್ಯ ಎಸಗಿದ್ದಾಳೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.
ಫೆ.5 ರಂದು ಕುಟುಂಬಸ್ಥರು ರಾತ್ರಿ ನಿದ್ರೆಗೆ ಜಾರಿದ ವೇಳೆ ಮಚ್ಚು ಹಾಗೂ ಸುತ್ತಿಗೆಯಿಂದ ಕೊಲೆ ಮಾಡಿದ್ದಾಳೆ. ಆರೋಪಿ ಮಾಡಿದ್ದ ಕರೆಗಳು, ಟೆಕ್ನಿಕಲ್ ಸಾಕ್ಷಿಗಳು ಆಕೆಯ ಮೇಲೆ ಅನುಮಾನ ಮೂಡಿಸಿತ್ತು. ಅದರ ಮೇಲೆ ವಿಚಾರಣೆ ನಡೆಸಿದ್ವಿ. ಇದೀಗ ಕೃತ್ಯದ ಕುರಿತು ಆಕೆ ಬಾಯ್ಬಿಟ್ಟಿದ್ದಾಳೆ ಎಂದಿದ್ದಾರೆ.
ಒಬ್ಬಳೆ ಎಲ್ಲರನ್ನು ಕೊಲೆ ಮಾಡಿರುವುದಾಗಿ ಆರೋಪಿ ಹೇಳಿಕೆ
ಕೊಲೆಗೆ ಸಂಚು ರೂಪಿಸಿದ್ದ ಆರೋಪಿ ಲಕ್ಷ್ಮೀ ಬೆಲವತ್ತದ ಚಿಕನ್ ಶಾಪ್ನಿಂದ ಕೆಲಸವಿದೆ ಎಂದು ಮಚ್ಚು ತಂದಿದ್ದಾಳೆ. ಕೃತ್ಯ ನಡೆಸಿ ವಾಪಸ್ಸು ಫೆ. 6ರ ಬೆಳಗ್ಗೆ ಮಚ್ಚನ್ನು ಚಿಕನ್ ಶಾಪ್ಗೆ ಹಿಂದುರಿಗಿಸಿದ್ದಾಳೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.
ಐದು ಜನರನ್ನ ಕೊಲೆ ಮಾಡಿ ಏನೂ ಗೊತ್ತಿಲ್ಲದ ರೀತಿ ನಾಟಕವಾಡಿದ್ದಾಳೆ. ಬಳಿಕ ಘಟನೆಗೂ ನನಗೂ ಸಂಬಂಧ ಇಲ್ಲ ಅನ್ನುವ ರೀತಿ ಮತ್ತೆ ಕೆಆರ್ಎಸ್ಗೆ ಬಂದು ಕಣ್ಣೀರಿಡುತ್ತಿದ್ದಳು. ಇದೀಗ ಆರೋಪಿಯನ್ನ ವಶಕ್ಕೆ ಪಡೆದು ಹೆಚ್ಚಿನ ತನಿಖೆ ಮಾಡಲಾಗುತ್ತಿದೆ. ಕೊಲೆಗೊಳಗಾದ ಕುಟುಂಬಸ್ಥರ ಆಹಾರದಲ್ಲಿ ವಿಷ ಏನಾದರೂ ಹಾಕಿದ್ದಾರಾ? ಎಂದು ಎಫ್ಎಸ್ಐಎಲ್ ಲ್ಯಾಬ್ ಗೆ ಸಾಂಪೆಲ್ ಕಳುಹಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಓದಿ: ಮಂಡ್ಯ: ಐವರ ಭೀಕರ ಹತ್ಯೆ ನಡೆದ ಎರಡೇ ದಿನಗಳಲ್ಲಿ ಕೊಲೆಗಾತಿ ಅರೆಸ್ಟ್