ಮಂಡ್ಯ: ಸಿದ್ದರಾಮಯ್ಯ ಬುರುಡೆ ಬಿಡುವುದರಲ್ಲಿ ನಂಬರ್ 1 ಎಂದು ಸಚಿವ ಆರ್.ಅಶೋಕ್ ಮಾಜಿ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಇದ್ದಾಗ ಏಳು ಕೆಜಿ ಅಕ್ಕಿ ಕೊಡ್ಲಿಲ್ಲ. ಕುಮಾರಸ್ವಾಮಿಯವರು ಹೇಳಿದ್ದಾರೆ ಹಣ ಮೀಸಲಿಡದೆ 7 ಕೆಜಿ ಕೊಡ್ತೀವಿ ಅಂತಾ ಬುರುಡೆ ಬಿಟ್ರು ಎಂದು ವ್ಯಂಗ್ಯವಾಡಿದರು.
ಸುಳ್ಳು ಅಂದ್ರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಅಂದ್ರೆ ಸುಳ್ಳು : ಸಿದ್ದರಾಮಯ್ಯ ಅವಧಿಯಲ್ಲಿ ಜಾತಿ ಗಣತಿ ಮಾಡ್ತೀವಿ ಅಂತಾ ₹180 ಕೋಟಿ ಕೊಟ್ರು. ಜಾತಿ ಗಣತಿ ಮಾಡಲು ಎಷ್ಟುದಿನ ಬೇಕು? ಎಂದು ವಿಪಕ್ಷ ನಾಯಕನಿಗೆ ಪ್ರಶ್ನೆ ಮಾಡಿದ ಅವರು, ವರದಿ ಸಿದ್ಧವಾದ್ರೂ ಬಿಡುಗಡೆ ಮಾಡೋ ಧೈರ್ಯ ಮಾಡ್ಲಿಲ್ಲ. ಸಿದ್ದರಾಮಯ್ಯ ಏನೇ ಹೇಳಿದರೂ ಅದು ಸುಳ್ಳು. ಸುಳ್ಳು ಅಂದ್ರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಅಂದ್ರೆ ಸುಳ್ಳು ಎಂದು ಆರ್.ಅಶೋಕ್ ಕಿಡಿಕಾರಿದರು.
ಮತಾಂತರ ಎಂಬುದು ಹೀನ ಕೃತ್ಯ : ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಮತಾಂತರ ಪ್ರಕರಣ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮತಾಂತರ ಎಂಬುದು ಹೀನ ಕೃತ್ಯ. ಯಾವ ಧರ್ಮದಲ್ಲಿ ಹುಟ್ಟಿರುತ್ತಾರೆ ಆ ಧರ್ಮದಲ್ಲಿ ಪೂಜೆ ಮಾಡುವುದು ಅವರ ಹಕ್ಕು. ಆದ್ರೆ, ವಿದೇಶದಿಂದ ಹಣ ತಂದು, ಏಜೆಂಟ್ಗಳ ಮೂಲಕ ಹಣ ಕೊಟ್ಟು ಆಮಿಷ ಒಡ್ಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿಯೂ ಮತಾಂತರ ಪಿಡುಗು ಇದೆ : ಹಸು, ಎಮ್ಮೆ ಕೊಡುಸ್ತೀನಿ, ಆಸ್ಪತ್ರೆ ಖರ್ಚು ನೋಡ್ಕೊಳ್ತೀನಿ ಅಂತಾ ಲಕ್ಷಾಂತರ ಜನರನ್ನ ಮತಾಂತರ ಮಾಡಲು ಮುಂದಾಗ್ತಿದ್ದಾರೆ. ಇದು ದೊಡ್ಡ ಪಿಡುಗು, ನಮ್ಮ ರಾಜ್ಯದಲ್ಲಿಯೂ ಇದೆ. ಮಂಡ್ಯ ಜಿಲ್ಲೆಯಲ್ಲಿಯೂ ಇದೆ. ಅಂತಹ ಸಮಾಜಘಾತುಕ, ದೇಶದ್ರೋಹಿ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ತೀವಿ ಎಂದು ತಿಳಿಸಿದರು.
ಮತಾಂತರಕ್ಕೆ ಬ್ರೇಕ್ ಹಾಕಲು ಬಿಜೆಪಿ ಕ್ರಮ : ಒಂದು ಮತಾಂತರಕ್ಕೆ ಇಂತಿಷ್ಟು ಹಣ ಸಿಗಲಿದೆ. ಆ ಹಣದ ಆಸೆಗೆ ಮತಾಂತರ ಮಾಡ್ತಿರುವುದು ನಮಗೆ ಗೊತ್ತಾಗಿದೆ. ಬಿಜೆಪಿ ಸರ್ಕಾರ ಮತಾಂತರಕ್ಕೆ ಬ್ರೇಕ್ ಹಾಕಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೆ. ಆದ್ರೆ, ಈ ಕೆಲಸವನ್ನ ಕಾಂಗ್ರೆಸ್ ಸರ್ಕಾರ ಬಂದ್ರೆ ಮಾಡಲ್ಲ, ನಮ್ಮ ಸರ್ಕಾರದ ಅವಧಿಯಲ್ಲೇ ಮಾಡ್ತೀವಿ ಎಂದರು.
ಯಾರು ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ಹಾಗೆ ಇಲ್ಲ : ಅಧಿಕಾರಿಗಳ ಕೈ ಕಟ್ಟಿಹಾಕಿದ ಬಿಜೆಪಿ ಸರ್ಕಾರ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅಧಿಕಾರಿಗಳ ಸ್ವಾತಂತ್ರ್ಯಕ್ಕೆ ಸರ್ಕಾರ ಕತ್ತರಿ ಹಾಕಿದೆ. ಅಧಿಕಾರಿಗಳು ಯಾರು ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ಹಾಗೆ ಇಲ್ಲ.
ಅಧಿಕಾರಿಗಳು ಇಲಾಖೆಯ ವಿಚಾರಗಳನ್ನು ಸಹ ತಿಳಿಸುವ ಹಾಗೆ ಇಲ್ಲ. ಇಲಾಖೆ ವಿಚಾರ ತಿಳಿಸಲು ಆಯಾ ಇಲಾಖೆಯ ಸಚಿವರಿದ್ದಾರೆ. ಅದನ್ನ ಬಿಟ್ಟು ಅಧಿಕಾರಿಗಳು ಮಾಹಿತಿ ನೀಡುವ ಹಾಗೆ ಇಲ್ಲ. ಅಲ್ಲದೇ ಸರ್ಕಾರಕ್ಕೆ ಮುಚುಗರ ತರುವ ಹಾಗೆ ಮಾತನಾಡುವ ಹಾಗೆ ಇಲ್ಲ. ಇಬ್ಬರು ಅಧಿಕಾರಿಗಳು ಜಗಳ ಆಡಿಕೊಂಡು ಮಾಧ್ಯಮದ ಮುಂದೆ ಬರುವ ಹಾಗೆ ಇಲ್ಲ ಎಂದು ಹೇಳಿದರು.