ಮಂಡ್ಯ: ಸರಕು ಸಾಗಾಣೆ ವಾಹನದಲ್ಲಿ ಜನರ ಪ್ರಯಾಣವನ್ನು ನಿಷೇಧಿಸಿರುವ ಸರ್ಕಾರ, ವಾಹನ ಮಾಲೀಕರಿಗೆ ಎಚ್ಚರಿಕೆ ನೀಡಿತ್ತು. ಆದರೆ, ಸಕ್ಕರೆ ಜಿಲ್ಲೆಯ ವಾಹನ ಸವಾರರು ಈ ಎಚ್ಚರಿಕೆಯ ಕರೆಗಂಟೆಗೆ ಕ್ಯಾರೇ ಎನ್ನುತ್ತಿಲ್ಲ.
ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ತವರೂರಾದ ಮದ್ದೂರು ಪಟ್ಟಣದಲ್ಲಿಂದು ಸಂಚಾರಿ ಪೊಲೀಸರು ವಾಹನಗಳ ತಪಾಸಣೆ ಮಾಡುತ್ತಿದ್ದರು. ಚಾಲಕರ ಚಾಲನಾ ಪರವಾನಗಿ, ವಿಮೆ ಸೇರಿದಂತೆ ಹಲವು ದಾಖಲೆಗಳನ್ನ ಪರಿಶೀಲಿಸುತ್ತಿದ್ದರು. ಈ ಸಂದರ್ಭದಲ್ಲಿ ಲಾರಿಯೊಂದು ಮದುವೆ ದಿಬ್ಬಣಕ್ಕೆ ಹೊರಟಿತ್ತು. ಈ ವೇಳೆ ಲಾರಿ ತಡೆದ ಪೊಲೀಸರು ದಂಡವನ್ನಷ್ಟೇ ಕಟ್ಟಿಸಿಕೊಂಡು ಹಾಗೇನೇ ಬಿಟ್ಟು ಕಳುಹಿಸಿದ್ದಾರೆ.
ರಾಜ್ಯ ಸರ್ಕಾರ ಸರಕು ಸಾಗಾಣಿಕೆ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸಬಾರದು ಎಂದು ಸೂಚನೆ ನೀಡಿದೆ. ಆದರೂ ಅಧಿಕಾರಿಗಳು ಈ ನಿಯಮವನ್ನು ಕಾರ್ಯರೂಪಕ್ಕೆ ತರುತ್ತಿಲ್ಲ. ಎಷ್ಟೋ ವಾಹನಗಳಲ್ಲಿ ಜನರನ್ನು ಸಾಗಾಣಿಕೆ ಮಾಡುತ್ತಿದ್ದರೂ ಶಿಸ್ತು ಕ್ರಮಕ್ಕೆ ಮುಂದಾಗುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.