ಮಂಡ್ಯ: ಬಾರ್ ಮಾಲೀಕನ ಹತ್ಯೆಗೆ ಸುಪಾರಿ ಕೊಟ್ಟಿದ್ದ ಆರ್ಟಿಐ ಕಾರ್ಯಕರ್ತ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯ (ಭಾರತೀ ನಗರ) ಸಂಕ್ರಾಂತಿ ಬಾರ್ ಮಾಲೀಕ ನಾಗರಾಜ್ ಹತ್ಯೆಗೆ ಸುಪಾರಿ ಗ್ಯಾಂಗ್ ಸಂಚು ನಡೆಸಿತ್ತು ಎನ್ನಲಾಗಿದೆ. ಈ ಪ್ರಕರಣದಲ್ಲಿ ಆರ್ಟಿಐ ಕಾರ್ಯಕರ್ತ ಬಸವೇಗೌಡ ಹಾಗೂ ಮತ್ತೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ವಿವರ:
ಅ.9ರಂದು ಮಂಡ್ಯದ ಹರಳಹಳ್ಳಿ ಬಳಿ ಬೈಕ್‌ಗೆ ಗೂಡ್ಸ್ ಆಟೋ ಡಿಕ್ಕಿಯಾಗಿ ನಾಗರಾಜ್ ಗಂಭೀರವಾಗಿ ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಕುರಿತು ಅವರ ಪುತ್ರ ಅರುಣ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿ ಸುಪಾರಿ ಹತ್ಯೆಯ ಸಂಚು ಬಹಿರಂಗ ಮಾಡಿದ್ದಾರೆ.
ಅಪಘಾತವೆಂದು ನಂಬಿಸಿ ಹತ್ಯೆಗೆ ಸ್ಕೆಚ್:
ನಾಗರಾಜ್ ಸಹೋದರ ಬೆಟ್ಟೇಗೌಡ ಬಾರ್ ಲೈಸನ್ಸ್ ಪಡೆದಿದ್ದರು. 2005ರಲ್ಲಿ ಬೆಟ್ಟೇಗೌಡ ದಂಪತಿ ಮೃತಪಟ್ಟ ಬಳಿಕ ಅವರಿಗಿದ್ದ ಇಬ್ಬರು ಹೆಣ್ಣು ಮಕ್ಕಳಾದ ಕಲ್ಯಾಣಿ ಮತ್ತು ಶ್ವೇತ ಅಪ್ರಾಪ್ತರು ಅನ್ನೋ ಕಾರಣಕ್ಕೆ ಅಬಕಾರಿ ಅಧಿಕಾರಿ ಮೃತ ಬೆಟ್ಟೇಗೌಡ ತಾಯಿ ಕೆಂಪಮ್ಮ ಹೆಸರಿಗೆ ಪರವಾನಗಿ ನೀಡಿದ್ದಾರೆ. ಆ ವೇಳೆ ಬೆಟ್ಟೇಗೌಡರ ಪುತ್ರಿಯರು ಪ್ರೌಢಾವಸ್ಥೆಗೆ ಬಂದ ನಂತರ ಅವರಿಗೆ ಬಾರ್ ಲೈಸನ್ಸ್ ನೀಡುವಂತೆಯೂ ಉಲ್ಲೇಖಿಸಲಾಗಿತ್ತು. ಬಳಿಕ, ನಾಗರಾಜು ಬಾರ್ ನಡೆಸಿಕೊಂಡು ಹೋಗ್ತಿದ್ದ. 4-5 ವರ್ಷದ ಬಳಿಕ ಪ್ರೌಢಾವಸ್ಥೆಗೆ ಬಂದ ಬೆಟ್ಟೇಗೌಡರ ಪುತ್ರಿಯರು, ಬಾರ್ ಪರವಾನಗಿ ವಾಪಸ್ ನೀಡುವಂತೆ ಕೇಳಿದ್ದಾರೆ. ಅದಕ್ಕೆ ಒಪ್ಪದ ನಾಗರಾಜ್ ಇಲ್ಲಸಲ್ಲದ ಖ್ಯಾತೆ ತೆಗೆದು ಜಗಳ ಶುರುಮಾಡಿದ್ದಾನೆ.
ಬೆಟ್ಟೇಗೌಡರ ಸ್ನೇಹಿತನಾಗಿದ್ದ ಅಬಕಾರಿ ಗಾರ್ಡ್ ರಾಮಚಂದ್ರ ಕೂಡ ರಾಜಿ ಪಂಚಾಯತಿ ಮಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದರು. ಆದ್ರೆ ದೊಡ್ಡಪ್ಪ ನಾಗರಾಜ್ ಬಳಿ ಬಾರ್ ಲೈಸನ್ಸ್ ವಾಪಸ್ ಪಡೆಯಲು ಕಲ್ಯಾಣಿ ಮತ್ತು ಶ್ವೇತ ವಿಫಲರಾಗಿದ್ದರು. ಆ ನಂತರ ಕಲ್ಯಾಣಿ ಪತಿ ನಂದೀಶ್, RTI ಕಾರ್ಯಕರ್ತ ಬಸವೇಗೌಡ ಅವರನ್ನು ಪರಿಚಯಿಸಿಕೊಂಡು ಆತನ ಮೂಲಕ RTI ಅರ್ಜಿ ಹಾಕಿಸಿ, ಬಾರ್ ಲೈಸನ್ಸ್ ಕುರಿತು ದಾಖಲಾತಿ ಪಡೆದುಕೊಳ್ಳಲು ಮುಂದಾಗಿದ್ದಾನೆ. ಈ ವಿಚಾರ ಬಸವೇಗೌಡ ಹಾಗೂ ನಾಗರಾಜ್ ಮಧ್ಯೆ ದ್ವೇಷ ಹುಟ್ಟು ಹಾಕಿದೆ. ಅವರಿಬ್ಬರ ದ್ವೇಷ ಮುಂದುವರೆದು ಮಂಡ್ಯದ ಅಬಕಾರಿ ಕಚೇರಿ ಎದುರು ಮಾರಾಮಾರಿಯೇ ನಡೆದು ಹೋಗಿತ್ತು. ಈ ಗಲಾಟೆಯಲ್ಲಿ ನಾಗರಾಜ್ ಹಾಗೂ ಆತನ ಪುತ್ರ ಅರುಣ್ ಮೇಲೆ ಬಸವೇಗೌಡ ಹಲ್ಲೆ ನಡೆಸಿದ್ದಾನೆ ಎಂದು ಮಂಡ್ಯ ಪಶ್ಚಿಮ ಠಾಣೆಯಲ್ಲಿ ದೂರು ನೀಡಲಾಗಿತ್ತು.
ಈ ಬೆಳವಣಿಗೆಯ ಬಳಿಕ ನಾಗರಾಜ್ನನ್ನು ಮುಗಿಸುವ ನಿರ್ಧಾರಕ್ಕೆ RTI ಕಾರ್ಯಕರ್ತ ಬಸವೇಗೌಡ ಬಂದಿದ್ದು, ಅದರಂತೆ ಜೈಲಿನಲ್ಲಿದ್ದ ತೊಪ್ಪನಹಳ್ಳಿ ಕೊಲೆ ಆರೋಪಿ ಪ್ರಸನ್ನ ಎಂಬುವನನ್ನು ಬಸವೇಗೌಡ ಸಂಪರ್ಕಿಸಿದ್ದ. ಜೈಲಿನಿಂದ ಬಿಡುಗಡೆಯಾಗಿದ್ದ ಪ್ರಸನ್ನ, ತನ್ನಿಬ್ಬರು ಸ್ನೇಹಿತರಿಗೆ ಸುಪಾರಿ ನೀಡುವ ಉಪಾಯ ನೀಡಿದ್ದನು. ಅವನ ಸಲಹೆಯಂತೆ ಶರತ್ ಹಾಗೂ ಅರುಣ್‌ಗೆ ಕೊಲೆಗೆ ಸುಪಾರಿ ನೀಡಿದ್ದ ಬಸವೇಗೌಡ, 50 ಸಾವಿರ ಹಣವನ್ನೂ ಕೂಡಾ ನೀಡಿದ್ದ. ಸುಪಾರಿ ತೆಗೆದುಕೊಂಡು ಹತ್ಯೆಗೆ ಹೊಂಚು ಹಾಕಿದ್ದ ಹಂತಕರು, ಗೂಡ್ಸ್ ಆಟೋ ಬಾಡಿಗೆ ಪಡೆದು ಅಪಘಾತ ನಡೆಸಿ ನಾಗರಾಜ್ನನ್ನು ಹತ್ಯೆ ಮಾಡಲು ಮುಂದಾಗಿದ್ದರು.
ಮಂಡ್ಯದಿಂದ ಕೆಎಂ ದೊಡ್ಡಿಗೆ ವಾಪಸ್ ಆಗ್ತಿದ್ದ ನಾಗರಾಜ್ ಹತ್ಯೆಗೆ ಕಾದು ಕುಳಿತ್ತಿದ್ದ ದುಷ್ಕರ್ಮಿಗಳು, ಹರಳಹಳ್ಳಿ ಬಳಿ ಗೂಡ್ಸ್ ಆಟೋವನ್ನು ನಾಗರಾಜ್ ಬೈಕ್‌ಗೆ ಗುದ್ದಿಸಿದ್ದಾರೆ. ಈ ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಚೇತರಿಸಿಕೊಂಡಿದ್ದರು.