ಮಂಡ್ಯ: ರಸ್ತೆ ಬದಿ ಇದ್ದ ಜಾಗವನ್ನು ವಶಪಡಿಸಿಕೊಂಡಿದ್ದ ಭೂ ಮಾಲೀಕರಿಗೆ, ರಸ್ತೆ ಅಗಲೀಕರಣ ಮಾಡುವ ಉದ್ದೇಶದಿಂದ ಅದನ್ನು ಬಿಟ್ಟುಕೊಡುವಂತೆ ಸರ್ಕಾರ ಹಣ ನೀಡಿತ್ತು. ಆದ್ರೆ ಹಣ ತೆಗೆದುಕೊಂಡ್ರೂ ಜಾಗ ಬಿಡಲು ಮಾಲೀಕರು ಸಿದ್ಧವಿರಲಿಲ್ಲ. ಇದೀಗ ಎಚ್ಚೆತ್ತುಕೊಂಡ ಜಿಲ್ಲಾಡಳಿತ ತೆರವು ಕಾರ್ಯಾಚರಣೆ ಮಾಡಲು ಮುಂದಾಗಿದೆ.
ಇಂದು ಬೆಳಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಮಂಡ್ಯ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಮದ್ದೂರು ಪಟ್ಟಣದಲ್ಲಿ ತೆರವು ಕಾರ್ಯಾಚರಣೆ ಮಾಡಿದರು. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆದು ಭೂ ಮಾಲೀಕರಿಗೆ ಹಣವನ್ನೂ ನೀಡಲಾಗಿದೆ. ಆದರೆ ಮಾಲೀಕರು ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗಿದೆ ಎಂದು ಭೂಮಿ ನೀಡಲು ಹಿಂದೇಟು ಹಾಕಿದ್ದರು.
ಕಾಮಗಾರಿ ನಡೆಸುವ ಸಂಸ್ಥೆಗೆ ಒಪ್ಪಂದದಂತೆ ಈಗಾಗಲೇ ಭೂಮಿಯನ್ನು ನೀಡಬೇಕಾಗಿತ್ತು. ಭೂ ಮಾಲೀಕರು ತೆರವು ಮಾಡದ ಹಿನ್ನೆಲೆ ಅಧಿಕಾರಿಗಳೇ ಮುಂದೆ ನಿಂತು ತೆರವು ಕಾರ್ಯಾಚರಣೆ ಮಾಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಿಲ್ಲಾಡಳಿತಕ್ಕೆ ಕಾಮಗಾರಿಗಾಗಿ ಭೂಮಿ ನೀಡುವಂತೆ ಸೂಚನೆ ನೀಡಿತ್ತು. ಸೂಚನೆ ಹಿನ್ನೆಲೆ ತೆರವು ಕಾರ್ಯಾಚರಣೆ ಆರಂಭ ಮಾಡಲಾಗಿದೆ.
ತೆರವು ಕಾರ್ಯಾಚರಣೆಗೆ ಜಿಲ್ಲಾಡಳಿತ ತಂಡಗಳನ್ನು ರಚನೆ ಮಾಡಿದೆ. ಎಲ್ಲೆಲ್ಲಿ ತೆರವು ಮಾಡಿಲ್ಲವೋ ಅಲ್ಲೆಲ್ಲಾ ಅಧಿಕಾರಿಗಳ ತಂಡ ತೆರಳಿ ಕಾರ್ಯಾಚರಣೆ ಮಾಡುತ್ತಿದ್ದು, ಕಾಮಗಾರಿ ನಡೆಸುವ ಸಂಸ್ಥೆಗೆ ಭೂಮಿ ನೀಡಲು ಮುಂದಾಗಿದೆ.