ಬೆಂಗಳೂರು: ಮಂಡ್ಯ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆಗಳು ಕಂಡು ಬರುತ್ತಿದೆ. ರಾಜ್ಯದಲ್ಲಿ ಕಳೆದ ಒಂದೆರಡು ವಾರದಿಂದ ಸಾಕಷ್ಟು ಚರ್ಚೆಯಲ್ಲಿರುವ ಜಿಲ್ಲೆ, ಇದೀಗ ಮೋಹಕ ತಾರೆಯ ಪ್ರವೇಶಕ್ಕೆ ಅಣಿಯಾಗುತ್ತಿದೆ ಎಂಬ ಮಾಹಿತಿ ಇದೆ.
ಚಿತ್ರರಂಗದಿಂದ ಬಂದವರನ್ನು ಸದಾ ಪೋಷಿಸುವ ಗುಣ ಹೊಂದಿರುವ ಜಿಲ್ಲೆಯ ಜನತೆ, ಈಗಾಗಲೇ ರೆಬೆಲ್ ಸ್ಟಾರ್ ಅಂಬರೀಶ್, ಸುಮಲತಾ ಅಂಬರೀಶ್ಗೆ ರಾಜಕೀಯ ನೆಲೆ ಕಲ್ಪಿಸಿದೆ. ಇದಕ್ಕಿಂತ ಮುಖ್ಯವಾಗಿ ಮೋಹಕ ತಾರೆ ಎಂದೇ ಜನಪ್ರಿಯರಾಗಿದ್ದ ನಟಿ ರಮ್ಯಾಗೆ ರಾಜಕೀಯ ಇಮೇಜ್ ನೀಡಿದ ನೆಲ ಇದಾಗಿದೆ. ಚಿತ್ರರಂಗದಲ್ಲಿ ಉತ್ತುಂಗದ ಸ್ಥಾನದಲ್ಲಿದ್ದ ರಮ್ಯಾ ಮಂಡ್ಯದಲ್ಲಿ ಎದುರಾದ ಉಪಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದು ಜೆಡಿಎಸ್ನ ಸಿ.ಎಸ್.ಪುಟ್ಟರಾಜು ವಿರುದ್ಧ ಗೆದ್ದು ಬೀಗಿದ್ದು ಇತಿಹಾಸ.
ಆರು ತಿಂಗಳ ಅವಧಿಗೆ ಸಂಸದೆಯಾಗಿ ದಿಲ್ಲಿಗೆ ತೆರಳಿದ್ದ ಕೀರ್ತಿ ಅವರ ಪಾಲಿಗಿದೆ. ಇದರ ಬೆನ್ನಲ್ಲೇ 2014ರಲ್ಲಿ ನಡೆದ ಚುನಾವಣೆಯಲ್ಲಿ 5518 ಮತಗಳ ಅಂತರದಲ್ಲಿ ಸಿ.ಎಸ್. ಪುಟ್ಟರಾಜು ಅವರು ರಮ್ಯಾರನ್ನು ಸೋಲಿಸಿ ಸೇಡು ತೀರಿಸಿಕೊಂಡರು. ಅಲ್ಲಿಯೇ ಮನೆ ಮಾಡಿಕೊಂಡು ವಾಸವಾಗಿದ್ದ ರಮ್ಯಾ ರಾತ್ರೋರಾತ್ರಿ ಮನೆ ಖಾಲಿಮಾಡಿಕೊಂಡು ಬಂದವರು, ಮಂಡ್ಯದತ್ತ ಮುಖ ಮಾಡಿಲ್ಲ.
ಕಾಂಗ್ರೆಸ್ ಪಕ್ಷ ಅವರಿಗೆ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯನ್ನಾಗಿ ಮಾಡಿ ರಾಷ್ಟ್ರೀಯ ಮಟ್ಟದ ನಾಯಕತ್ವ ನೀಡಿತು. ಆದರೆ ಕಳೆದ ಒಂದೂವರೆ ವರ್ಷದಿಂದ ಕಾಂಗ್ರೆಸ್ ಪಕ್ಷದ ಚಟುವಟಿಕೆಯಲ್ಲಿ ರಮ್ಯಾ ಕಾಣಿಸಿಕೊಂಡಿಲ್ಲ. ಚಿತ್ರರಂಗದಿಂದ ಮೊದಲೇ ದೂರವಾಗಿದ್ದರು. ಒಟ್ಟಾರೆ ಅಜ್ಞಾತರಾಗಿ ಬಿಟ್ಟಿದ್ದರು. ಇದೀಗ ಅವರು ತಮ್ಮ ರಾಜಕೀಯದ ಎರಡನೇ ಇನ್ನಿಂಗ್ಸ್ ತಮಗೆ ರಾಜಕೀಯ ನೆಲೆ ಕಲ್ಪಿಸಿದ ಮಂಡ್ಯದಿಂದಲೇ ಆರಂಭಿಸಲಿದ್ದಾರೆ ಎನ್ನಲಾಗುತ್ತಿದೆ.
ಲೋಕಸಭೆಗೋ, ವಿಧಾನಸಭೆಗೋ?:
ರಮ್ಯಾ ಶೀಘ್ರವೇ ಮಂಡ್ಯಕ್ಕೆ ತೆರಳಿ ಅಲ್ಲಿಂದಲೇ ತಮ್ಮ ರಾಜಕೀಯ ಮರು ಪ್ರವೇಶ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಇದಕ್ಕೆ ಇವರ ಬೆನ್ನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿಂತಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ತಾರಾ ಮೆರುಗು ಹೊಂದಿ, ತೆರೆಮರೆಗೆ ಸರಿದಿರುವ ಸಾಕಷ್ಟು ನಾಯಕ/ನಾಯಕಿಯರನ್ನು ಗುರುತಿಸಿ ಮತ್ತೆ ರಾಜಕೀಯ ಅಖಾಡಕ್ಕೆ ಎಳೆಯುತ್ತಿರುವ ಶಿವಕುಮಾರ್ ಈಗಾಗಲೇ ಸ್ತ್ರೀಶಕ್ತಿ ಸಮಿತಿ ರಚಿಸಿ ಅಲ್ಲಿ ಮಾಜಿ ಸಚಿವರಾದ ಉಮಾಶ್ರಿ, ಜಯಮಾಲಾ ಮುಂತಾದವರನ್ನು ಕಣಕ್ಕಿಳಿಸಿದ್ದಾರೆ. ಎಲ್ಲಾ ವಿಧದಲ್ಲೂ ತೆರೆ ಮರೆಗೆ ಸರಿದಿದ್ದ ನಾಯಕರನ್ನು, ಪಕ್ಷ ಬಿಟ್ಟು ಹೋದವರನ್ನು ಮರಳಿ ಸೆಳೆಯುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷಕ್ಕೆ ಉತ್ತಮ ನೆಲೆ ಒದಗಿಸಿಕೊಡುವ ಯತ್ನದಲ್ಲಿ ಇದ್ದಾರೆ.
ಅಂದಹಾಗೆ ರಮ್ಯಾ ಮಂಡ್ಯ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಮಾಹಿತಿ ಇದ್ದು, ಮುಂದಿನ ವಿಧಾನಸಭೆಯಲ್ಲಿ ಸ್ಪರ್ಧಿಸುತ್ತಾರೋ, ಲೋಕಸಭೆಗೋ ಎಂಬ ಬಗ್ಗೆ ಮಾಹಿತಿ ಇಲ್ಲ. ಒಟ್ಟಾರೆ ಮಂಡ್ಯದಲ್ಲಿ ಕಾಂಗ್ರೆಸ್ ಬಲ ವರ್ಧನೆ ಆಗಬೇಕಿದೆ. ಈಗಾಗಲೇ ಜೆಡಿಎಸ್ ಪ್ರಭಲ್ಯ ಹೆಚ್ಚಿದ್ದು, ಅದನ್ನು ಕಡಿಮೆ ಮಾಡಲು, ಪಕ್ಷಕ್ಕೆ ತಾರಾ ಮೆರುಗು ನೀಡುವುದೇ ಪರಿಹಾರ ಎಂಬ ತೀರ್ಮಾನಕ್ಕೆ ಡಿಕೆಶಿ ಬಂದಿದ್ದಾರೆ ಎನ್ನಲಾಗುತ್ತಿದೆ.
ಆಷಾಢ ಅಡ್ಡಿ:
ರಮ್ಯಾ ರಾಜಕೀಯ ರಂಗ ಪ್ರವೇಶಕ್ಕೆ ಆಷಾಢ ಅಡ್ಡಿಯಾಗಿದೆ. ಈ ಆಷಾಢ ಮಾಸ ಕಳೆಯುತ್ತಿದ್ದಂತೆ ಅವರು ಮಂಡ್ಯಕ್ಕೆ ತೆರಳಿ ಅಲ್ಲಿ ಅಧಿಕೃತ ಸಮಾರಂಭವೊಂದರಲ್ಲಿ ತಮ್ಮ ಮರು ಪ್ರವೇಶವನ್ನು ಪ್ರಕಟಿಸಲಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ಆ ಸಂದರ್ಭದಲ್ಲಿ ಉಪಸ್ಥಿತರಿದ್ದು, ಸಹಕಾರ ನೀಡುವಂತೆ ಮಂಡ್ಯದ ಜನರನ್ನು ಕೋರಲಿದ್ದಾರೆ ಎಂಬ ಮಾಹಿತಿ ಇದೆ.
ಈಗಾಗಲೇ ಜಿಲ್ಲೆಯಿಂದ ಆಯ್ಕೆಯಾಗಿರುವ ಸಂಸದೆ ಸುಮಲತಾ ಅಂಬರೀಶ್ ಕ್ಷೇತ್ರದತ್ತ ಬರುವುದಿಲ್ಲ ಎಂಬ ಬೇಸರ ಸ್ಥಳೀಯರಲ್ಲಿ ಇದೆ. ಇದರ ಜತೆ ಜೆಡಿಎಸ್ನಲ್ಲಿ ಅಂತಹ ಪ್ರಭಾವಿ ನಾಯಕರು ಕಾಣಿಸುತ್ತಿಲ್ಲ. ರಮ್ಯಾ ಬಗ್ಗೆ ಜನರ ಮನಸ್ಸಿನಲ್ಲಿರುವ ನೋವು ಅದ್ಯಾವಾಗಲೋ ಕರಗಿ ಹೋಗಿದೆ. ಇದೀಗ ಹೊಸದಾಗಿ ರಾಜಕೀಯ ಬದುಕು ಕಲ್ಪಿಸುವಂತೆ ಮಂಡ್ಯದ ಜನರ ಮುಂದೆ ಇವರೂ ಸೆರಗೊಡ್ಡಿ ಬೇಡಿಕೊಂಡರೆ ಮತದಾರರ ಮನಸ್ಸು ಇನ್ನಷ್ಟು ಕರಗಲಿದೆ ಎನ್ನುವ ವಿಶ್ವಾಸ ಕಾಂಗ್ರೆಸ್ ನಾಯಕರದ್ದಾಗಿದೆ.