ಮಂಡ್ಯ: ಜಿಲ್ಲೆಯ ಹಲವೆಡೆ ಭರ್ಜರಿ ಮಳೆಯಾಗಿದ್ದು ಕೆ. ಆರ್. ಪೇಟೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಂಪೂರ್ಣ ಜಲಾವೃತವಾಗಿದೆ. 20ಕ್ಕೂ ಹೆಚ್ಚು ಪ್ರಯಾಣಿಕರು ನೀರಿನ ಮಧ್ಯೆ ಸಿಲುಕಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್ಗಾಗಿ ಕಾದು ಕುಳಿತಿದ್ದ ಪ್ರಯಾಣಿಕರು ಮಳೆಯಿಂದಾಗಿ ಕೆಲಕಾಲ ಪರದಾಡಿದರು. ಬಸ್ ನಿಲ್ದಾಣದ ಒಳಗೆ ಮಕ್ಕಳು, ಗರ್ಭಿಣಿಯರು ಸೇರಿದಂತೆ 20ಕ್ಕೂ ಅಧಿಕ ಪ್ರಯಾಣಿಕರು ಸಿಲುಕಿದ್ದರು. ಇದೇ ವೇಳೆ, ಕರೆಂಟ್ ಸಹ ಕೈಕೊಟ್ಟಿದ್ದರಿಂದ ಮಳೆ ನೀರಿನಲ್ಲಿ ಸಿಕ್ಕಿಹಾಕಿಕೊಂಡ ಪ್ರಯಾಣಿಕರ ಕಿರುಚಾಟ ಮತ್ತಷ್ಟು ಆತಂಕ ಮೂಡಿಸಿತ್ತು. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಹಿನ್ನೆಲೆ KSRTC ಬಸ್ ನಿಲ್ದಾಣದ ಕಚೇರಿಗೂ ಕೂಡ ಮಳೆ ನೀರು ನುಗ್ಗಿದೆ. ಬಸ್ ಸ್ಟ್ಯಾಂಡ್ನಲ್ಲಿ ಐದಾರು ಅಡಿ ನೀರು ನಿಂತಿತ್ತು.
ನಾಡದೋಣಿ ಬಳಿಸಿ ಪ್ರಯಾಣಿಕರ ರಕ್ಷಣೆ:
ಮಳೆ ನೀರಿನ ಜೊತೆಗೆ ಹಾವುಗಳ ಕಾಟ ಸಹ ಹೆಚ್ಚಾಗಿದ್ದು, ಪ್ರಯಾಣಿಕರು ತಮ್ಮನ್ನು ಕಾಪಾಡುವಂತೆ ಚೀರಾಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಸಬ್ ಇನ್ಸ್ಪೆಕ್ಟರ್ ಸುರೇಶ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಾಡದೋಣಿ ಬಳಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಬಸ್ ನಿಲ್ದಾಣದಿಂದ ಹೊರ ತಂದಿದ್ದಾರೆ.