ಮಂಡ್ಯ: ಜಿಲ್ಲೆಯಲ್ಲಿ ಮತ್ತೊಂದು ಕಲ್ಲು ಗಣಿಗಾರಿಕೆ ಮೇಲೆ ನಿಷೇಧಾಜ್ಞೆ ಹೇರಲಾಗಿದೆ. ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆ ಅಕ್ರಮ ಎಂದು ಈಗಾಗಲೇ ಜಿಲ್ಲಾಡಳಿತ ಬೀಗ ಜಡಿದಿದೆ. ಈಗ ಮತ್ತೊಂದು ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟದ ಅರಣ್ಯಪ್ರದೇಶದಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ಅಕ್ರಮ ಎಂದು ತಾಲೂಕು ಆಡಳಿತ ಘೋಷಿಸಿದೆ. ತಾಲೂಕಿನ 12 ಗ್ರಾಮಗಳು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಅಕ್ರಮ ಕಲ್ಲುಗಣಿಗಾರಿಕೆಗಳ ಮೇಲೆ ನಿಷೇಧಾಜ್ಞೆ ಜಾರಿಗೊಳಿಸಿ ತಹಶಿಲ್ದಾರ್ ನಾಗೇಶ್ ಆದೇಶ ಹೊರಡಿಸಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಜಕ್ಕನಹಳ್ಳಿ, ಚನ್ನಕೆರೆ, ಕಾಳೇನಹಳ್ಳಿ, ಗಣಂಗೂರು, ಸಿದ್ದಾಪುರ, ಮುಂಡುಗದೊರೆ, ಹಂಗರಹಳ್ಳಿ, ಗೌಡಳ್ಳಿ, ಕೋಡಿಶೆಟ್ಟಿಪುರ, ನೀಲನ ಕೊಪ್ಪಲು, ಟಿಎಂ ಹೊಸೂರು, ಶ್ರೀರಾಮಪುರ ಸೇರಿದಂತೆ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಕಲ್ಲುಗಣಿಗಾರಿಕೆಯನ್ನು ನಿಷೇಧಿಸಲಾಗಿದೆ.
ಈ ನಿಷೇಧಾಜ್ಞೆಯು ಅಕ್ಟೋಬರ್ 8ರವರೆಗೆ ಇರಲಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ಈಗಾಗಲೇ ಈ ವ್ಯಾಪ್ತಿಯಲ್ಲಿ ಹಲವರು ಅಕ್ರಮ ಕಲ್ಲು ಗಣಿಗಾರಿಕೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.