ಮಂಡ್ಯ: ನಗರದ ರೈಸ್ ಮಿಲ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಪಡಿತರ ಅಕ್ಕಿಯನ್ನು ಪಾಲಿಶ್ ಮಾಡಿ ವಿದೇಶಕ್ಕೆ ರಫ್ತು ಮಾಡಲು ಶೇಖರಿಸಿಡಲಾಗಿದ್ದ ನೂರಾರು ಚೀಲ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯಲ್ಲಿ ಪಡಿತರ ಅಕ್ಕಿಯನ್ನು ಪಾಲಿಶ್ ಮಾಡಿ ವಿದೇಶಕ್ಕೆ ರಫ್ತು ಮಾಡುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಪಂಜಾಬ್‌ನಿಂದ ಪಡಿತರ ಅಕ್ಕಿ ತಂದು ಪಾಲಿಶ್ ಮಾಡುತ್ತಿರುವ ದಂಧೆಕೋರರು, ಬಡವರ ಅಕ್ಕಿಯನ್ನು ಶ್ರೀಮಂತರಿಗೆ ಮಾರಾಟ ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಡ್ಯದ ಕೈಗಾರಿಕಾ ಪ್ರದೇಶದಲ್ಲಿರುವ ಲಕ್ಷ್ಮೀದೇವಿ ರೈಸ್ ಮಿಲ್ ಮೇಲೆ ಅಧಿಕಾರಿಗಳು ರಾತ್ರಿ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಲಾರಿ ಚಾಲಕ ಪರಾರಿಯಾಗಿದ್ದಾನೆ. ಪಾಲಿಶ್ ಅಕ್ಕಿಯನ್ನೇ ಸಣ್ಣ ಅಕ್ಕಿ ರೀತಿ ಪ್ಯಾಕ್ ಮಾಡಿ ವಿವಿಧ ಬ್ರಾಂಡ್‌ಗಳ ಮೂಲಕ ಆಫ್ರಿಕಾ, ಮಲೇಶಿಯಾ, ಅರಬ್ ರಾಷ್ಟ್ರ ಸೇರಿದಂತೆ ಹಲವು ದೇಶಗಳಿಗೆ ರಫ್ತು ಮಾಡುತ್ತಿದ್ದ ಬಗ್ಗೆ ಮಾಹಿತಿ ದೊರೆತಿದೆ. ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.