ಮಂಡ್ಯ: ಜಿಲ್ಲೆಯ ಕೀಲಾರ ಗ್ರಾಮ ಪಂಚಾಯಿತಿಯಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಮಾಡಲು ಸಜ್ಜಾಗಿದ್ದು, ಎಲ್ಲ ಗ್ರಾಮಸ್ಥರಿಗೂ ಇದರ ಬಗ್ಗೆ ಅರಿವು ಮೂಡಿಸಿ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿಸಲು ದಿಟ್ಟ ಹೆಜ್ಜೆ ಇಡುತ್ತಿದ್ದಾರೆ.
ಪ್ಲಾಸ್ಟಿಕ್ ನಿಷೇಧ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲ ಅಂಗಡಿಗಳಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜೊತೆ ಪಂಚಾಯತ್ ಸದಸ್ಯರೇ ಖುದ್ದು ಭೇಟಿ ನೀಡಿ ಮನವರಿಕೆ ಮಾಡುತ್ತಿದ್ದಾರೆ. ಅಲ್ಲಲ್ಲಿ ನೋಟಿಸ್ ಅಂಟಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಕೆಲವು ಅಂಗಡಿ ಮಾಲೀಕರು ಸಹಕಾರ ನೀಡುತ್ತಿದ್ದು, ಈಗಾಗಲೇ ಬಟ್ಟೆ ಹಾಗೂ ಪೇಪರ್ ಬ್ಯಾಗ್‌ಗಳನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ.
ಗ್ರಾಮ ಪಂಚಾಯಿತಿ ಸೇರಿದಂತೆ ಗ್ರಾಮದಲ್ಲಿನ 30 ಕ್ಕೂ ಹೆಚ್ಚು ಸಂಘಟನೆಗಳ ಯುವಕರು, ಮುಖಂಡರು ಪ್ಲಾಸ್ಟಿಕ್ ಮುಕ್ತ ಗ್ರಾಮಕ್ಕೆ ಕೈ ಜೋಡಿಸಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳೂ ಸಹ ತಮ್ಮ ಪೋಷಕರಿಗೆ ತಿಳುವಳಿಕೆ ನೀಡುತ್ತಿದ್ದು, ಶೀಘ್ರವಾಗಿ ಕೀಲಾರ ಪ್ಲಾಸ್ಟಿಕ್ ಮುಕ್ತ ಗ್ರಾಮವಾಗಲಿದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಇದೆ.