ಮಂಡ್ಯ:ರೈತರ ಜೀವನಾಡಿ ಮೈಶುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಸ್ಥಗಿತಗೊಂಡಿದೆ. ಅವಧಿಗೂ ಮುನ್ನ ಕಬ್ಬು ಅರೆಯುವಿಕೆ ಸ್ಥಗಿತಗೊಳಿಸಿದ್ದು, ಕಾರ್ಖಾನೆಗೆ ಅಗತ್ಯ ಕಬ್ಬು ಪೂರೈಕೆಯಲ್ಲಿ ಕೊರತೆ ಎದುರಾಗಿದೆ. 2022 ರ ಸೆ.1 ರಂದು ತುರಾತುರಿಯಲ್ಲಿ ಕಾರ್ಖಾನೆ ಆರಂಭ ಗೊಂಡಿತ್ತು. ಪ್ರಾರಂಭವಾದ 5 ತಿಂಗಳಲ್ಲಿ 1 ಲಕ್ಷದ 300 ಟನ್ ಕಬ್ಬು ನುರಿಸಲಾಗಿದೆ. ತಾಂತ್ರಿಕ ದೋಷವಿದ್ದರೂ ಐದು ತಿಂಗಳು ಕಬ್ಬು ನುರಿಸಿ ಕಾರ್ಯ ನೆರವೇರಿಸಿದೆ.
ಕಾರ್ಖಾನೆ ನಷ್ಟದ ಬಗ್ಗೆ ಸರ್ಕಾರಕ್ಕೆ ಪತ್ರ: ಕಾರ್ಖಾನೆ ಸಂಪೂರ್ಣ ದುರಸ್ತಿ ಕಾರ್ಯಕ್ಕೆ ಅನುದಾನ ಬಿಡುಗಡೆಗೆ ಮೈಶುಗರ್ ಆಡಳಿತ ಮಂಡಳಿ ಸರ್ಕಾರಕ್ಕೆ ಪತ್ರ ಬರೆದಿದೆ. ಕಾರ್ಖಾನೆ ನಿನ್ನೆ ರಾತ್ರಿಯಿಂದ ಕಬ್ಬು ನುರಿಸುವಿಕೆ ಸ್ಥಗಿತಗೊಳಿಸಿರುವುದನ್ನು ಎಂ ಡಿ ಅಪ್ಪಾಸಾಹೇಬ್ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಬ್ಬು ಪೂರೈಕೆಯಲ್ಲಿ ವ್ಯತ್ಯಯ :ಮುಂದಿನ ವರ್ಷದ ಸಿದ್ದತೆಗಾಗಿ ಮೈ ಶುಗರ್ ಕಬ್ಬು ಅರೆಯುವಿಕೆ ಕಾರ್ಯ ಸ್ಥಗಿತಗೊಳಿಸಲಾಗಿದೆ. ಕಾರ್ಖಾನೆ ಪ್ರತಿನಿತ್ಯ ಕನಿಷ್ಠ 2 ಸಾವಿರ ಟನ್ ಕಬ್ಬು ಅರೆಯುವ ಗುರಿ ಇಟ್ಟುಕೊಂಡಿತ್ತು. ಆದರೆ, ಬೇಡಿಕೆಗೆ ತಕ್ಕ ಹಾಗೆ ಕಾರ್ಖಾನೆಗೆ ಕಬ್ಬು ಸರಬರಾಜು ಆಗಲಿಲ್ಲ. ಕಬ್ಬು ಪೂರೈಕೆಯಲ್ಲಿ ವ್ಯತ್ಯಯ ಆಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂರು ತಿಂಗಳಲ್ಲಿ ಕಾರ್ಖಾನೆ ದುರಸ್ತಿ: ಸರ್ಕಾರ ತುರಾತುರಿಯಲ್ಲಿ ಕಾರ್ಖಾನೆ ಪ್ರಾರಂಭ ಮಾಡಿತ್ತು. ಕಬ್ಬು ಸಮರ್ಪಕವಾಗಿ ಸಿಗಲಿಲ್ಲ. ಬೇರೆ ಕಾರ್ಖಾನೆಗೆ ಕಬ್ಬು ಸರಬರಾಜು ಆಗಿದೆ. ಹಾಗಾಗಿ ಕಾರ್ಖಾನೆ ನಷ್ಟದಲ್ಲಿ ನಡೆದಿದೆ. ಇನ್ನೂ ಮೂರು ತಿಂಗಳಲ್ಲಿ ಕಾರ್ಖಾನೆ ದುರಸ್ತಿ ಕಾರ್ಯ ಸರಿಪಡಿಸಿ ಕಾರ್ಖಾನೆ ಸುಗಮವಾಗಿ ನಡೆಯಲು ಕ್ರಮ ವಹಿಸಬೇಕು. ಕಾರ್ಖಾನೆಗೆ ಉಳಿದ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಪಡಿಸುವ ಕೆಲಸವನ್ನ ಸರ್ಕಾರ ಮಾಡಬೇಕು. ಮೈಶುಗರ್ಗಾಗಿ ರೈತರು ಹಲವು ಹೋರಾಟ ನಡೆಸಿದರು. ಅದನ್ನು ಉಳಿಸಿ-ಬೆಳೆಸಿಕೊಂಡು ಹೋಗುವ ಕೆಲಸವನ್ನು ಸರ್ಕಾರ ಮಾಡಬೇಕು .ರೈತರಿಗೆ ಅನುಕೂಲವಾಗುವಂತೆ ಕಾರ್ಖಾನೆ ನಡೆಸಬೇಕು ಎಂದು ರೈತರ ಒತ್ತಾಯಿಸಿದ್ದಾರೆ.
ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ,ಮೈಶುಗರ್ ಈ ಬಾರಿಯ ಸೀಜನ್ ಮುಗಿದಿದೆ. ಏಕೆಂದರೆ ಕಬ್ಬು ಸಿಗ್ತಿಲ್ಲ. ಬಳ್ಳಾರಿ ಆಳುಗಳು ಬೇರೆ ಕಡೆ ಹೋಗ್ತಿದ್ದಾರೆ. ಮೈಶುಗರ್ ಮತ್ತೇ ನಿಜವಾಗಿಯೂ ಚಾಲನೆ ಆಗುತ್ತದೆ, ಇದರಲ್ಲಿ ಯಾವುದೇ ಸಂಶಯವಿಲ್ಲ. ಮುಂದಿನ ಬಾರಿ ಮಾತ್ರ ಕಬ್ಬು ನುರಿಸುವಿಕೆ ಸೀಜನ್ ಟೈಮ್ ಸರಿಯಾಗಿ ಮಾಡಬೇಕು ಹಾಗೂ ಕಬ್ಬು ಕಡಿಯುವ ಗ್ಯಾಂಗ್ಗಳಿಗೆ ಅಡ್ವಾನ್ಸ್ ನೀಡಿ ಕರೆದುಕೊಂಡು ಬಂದರೆ ಮುಂದಿನ ವರ್ಷದಿಂದ ಮೈಶುಗರ್ ಚೆನ್ನಾಗಿ ನಡೆಯುತ್ತದೆ ಎಂದು ತಿಳಿಸಿದರು.
ಈ ವರ್ಷದಂತೆ ತಾಂತ್ರಿಕ ದೋಷ ಮುಂದುವರಿದರೆ, ಮೈಶುಗರ್ ಮುಂದೆ ನಡೆಯೊದಿಲ್ಲ. ಬಾಗಿಲು ಮುಚ್ಚಬೇಕಾಗುತ್ತದೆ. ಇನ್ನೂ ಮೂರು ತಿಂಗಳು ಇದೆ. ಕಬ್ಬು ಕಡಿಯುವ ಗ್ಯಾಂಗ್ಗೆ ಅಡ್ವಾನ್ಸ್ ಕೊಟ್ಟು ಕರೆದುಕೊಂಡು ಬರಬೇಕು. ಯಂತ್ರೋಪಕರಣಗಳು ಏನಾದರೂ ದೋಷವಿದ್ದರೆ ಇನ್ನೂ ಮೂರು ತಿಂಗಳಲ್ಲಿ ಬೇಗ ಸರಿಪಡಿಸಿಕೊಂಡು, ಮುಂದಿನ ಸೀಜನ್ಗೆ ಮೈಶುಗರ್ ಸರ್ವಸಿದ್ಧಗೊಳ್ಳಬೇಕು ಎಂದು ಸಲಹೆ ನೀಡಿದರು.
ಸರಕಾರ ಮೈಶುಗರ್ಗೆ ಅನುದಾನ ಬಿಡುಗಡೆ: ಈಗಾಗಲೇ ಸರಕಾರ 50 ಕೋಟಿ ರೂ. ಗಳಲ್ಲಿ 30 ಕೋಟಿ ರೂ ನೀಡಿದೆ. ಇನ್ನು 20 ಕೋಟಿ ಅನುದಾನ ನೀಡಬೇಕು. ಸರಕಾರ ಮೈಶುಗರ್ಗೆ ಸಹಾಯ ಮಾಡಿದ್ದರಿಂದ ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿರುವ ಇತರ ಸಕ್ಕರೆ ಕಾರ್ಖಾನೆಗಳಿಗಿಂತ ಉತ್ತಮವಾಗಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಇಥೆನಾಲ್ ಘಟಕ ಸ್ಥಾಪಿಸಿ,ಹೆಚ್ಚು ಕಬ್ಬು ನುರಿಸುವಂತಾದರೆ ಮೈಶುಗರ್ ಲಾಭದತ್ತ ಮುಖಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂಓದಿ:ಅರಕಲಗೂಡು ಕ್ಷೇತ್ರಕ್ಕೆ ಎ ಮಂಜು ಜೆಡಿಎಸ್ ಅಭ್ಯರ್ಥಿ: ಹೆಚ್ ಡಿ ಕುಮಾರಸ್ವಾಮಿ