ಮಂಡ್ಯ: ನಿರೀಕ್ಷೆಯಂತೆ ಜಿಲ್ಲೆಯ ಸಹಕಾರಿ ಕ್ಷೇತ್ರದ ಸಕ್ಕರೆ ಕಾರ್ಖಾನೆ ನಿರಾಣಿ ಶುಗರ್ಸ್ ತೆಕ್ಕೆಗೆ ಬಿದ್ದಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 40 ವರ್ಷಗಳ ದೀರ್ಘಕಾಲದವರೆಗೆ ಗುತ್ತಿಗೆ ನೀಡಲು ಸರ್ಕಾರ ಘೋಷಣೆ ಮಾಡಿದೆ.
'ಈಟಿವಿ ಭಾರತ' ಇತ್ತೀಚೆಗೆ ಪಿಎಸ್‌ಎಸ್‌ಕೆ ಗುತ್ತಿಗೆ ಕುರಿತು ವರದಿ ಬಿತ್ತರಿಸಿತ್ತು. ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕರಷ್ಟೇ ನಿರಾಣಿ ಶುಗರ್ಸ್ ತೆಕ್ಕೆಗೆ ಕಾರ್ಖಾನೆ ಸಿಗಲಿದೆ ಎಂದು ಹೇಳಲಾಗಿತ್ತು.
ಇಂದು ರಾಜ್ಯ ಸರ್ಕಾರ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ ಗುತ್ತಿಗೆ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಪಿಎಸ್‌ಎಸ್‌ಕೆ ಕಾರ್ಖಾನೆಗೆ ಶಾಸಕ ಮುರುಗೇಶ್ ನಿರಾಣಿ ಒಡೆತನದ ನಿರಾಣಿ ಶುಗರ್ಸ್ ಬಿಡ್ ಸಲ್ಲಿಸಿತ್ತು. ಅತಿ ಹೆಚ್ಚಿಗೆ ಬಿಡ್ ಸಲ್ಲಿಸಿದ್ದರಿಂದ ರಾಜ್ಯ ಸಚಿವ ಸಂಪುಟ ನಿರಾಣಿ ತೆಕ್ಕೆಗೆ ನೀಡಲು ಒಪ್ಪಿಗೆ ಸೂಚಿಸಿದೆ. ಈ ವಿಚಾರವನ್ನು ಸಚಿವ ಮಾಧುಸ್ವಾಮಿ ಸಂಪುಟ ಸಭೆ ನಂತರ ತಿಳಿಸಿದ್ದಾರೆ.
ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಖಾಸಗಿಗೆ ವಹಿಸುವಂತೆ ಷೇರುದಾರರ ಸಭೆ ತೀರ್ಮಾನ ಮಾಡಿ ಸರ್ಕಾರಕ್ಕೆ ಮನವಿ ಮಾಡಿತ್ತು. ಮನವಿ ಹಿನ್ನೆಲೆ ಟೆಂಡರ್ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿತ್ತು. ಟೆಂಡರ್ ಹಾಕಿದ್ದ ಶಾಸಕ ಮುರುಗೇಶ್ ನಿರಾಣಿ ಮೂರು ಬಾರಿ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು.
ಪರಿಶೀಲನೆ ನಂತರ ಕಾರ್ಖಾನೆಯ ಪುನಶ್ಚೇತನ ಕುರಿತು ಮಾತನಾಡಿದ್ದರು. ಸದ್ಯ ಸರ್ಕಾರದ ನಿರ್ಧಾರ ಪ್ರಕಟವಾಗಿದೆ. ಇನ್ನೇನಿದ್ದರೂ ಆರಂಭವಷ್ಟೇ ಬಾಕಿ ಇದ್ದು, ನಿರಾಣಿ ಶುಗರ್ಸ್ ತೀರ್ಮಾನದ ಮೇಲೆ ಕಬ್ಬು ಬೆಳೆಗಾರರ ಭವಿಷ್ಯ ನಿಂತಿದೆ.