ಮಂಡ್ಯ : ಜಿಲ್ಲೆಯಲ್ಲಿ ಎನ್‌ಹೆಚ್ 275ರ ಕಾಮಗಾರಿ ನಡೆಯುತ್ತಿದೆ. ಇಂದು ವೀಕ್ಷಣೆ ಮಾಡಿ ಇದರಲ್ಲಿದ್ದ ಗೊಂದಲ ಹಾಗೂ ಅಡೆ ತಡೆಗಳನ್ನು ಬಗೆಹರಿಸುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಭರಸೆ ನೀಡಿದರು.
ಹೆದ್ದಾರಿ ಕಾಮಗಾರಿ ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ಎನ್‌ಹೆಚ್ 275 ಹೆದ್ದಾರಿ 57 ಕಿ.ಮೀ ಸಾಗಿದೆ. ಇದರ ಜೊತೆ ಅಮೃತ ಯೋಜನೆಯಲ್ಲಿ ಮಂಡ್ಯ ತಾಲೂಕಿನ 14 ಹಳ್ಳಿಗಳಿಗೆ ನೀರು ಸರಬರಾಜಾಗುವ ಕೇಂದ್ರ ಸರ್ಕಾರದ ಯೋಜನೆ ನಡೆಯುತ್ತಿದೆ. ಇದರಲ್ಲಿ 40 ಮೀಟರ್ ಜಾಗದ ಸಮಸ್ಯೆ ಇತ್ತು. ಜಾಗದವರ ಬಳಿ ಮಾತನಾಡಿ ಸಮಸ್ಯೆ ಬಗೆಹರಿಸಲಾಗಿದೆ ಎಂದರು.
ಮಂಡ್ಯ ತಾಲೂಕು ಜನಕ್ಕೆ ನೀರು ಸರಬರಾಜು ಆಗುತ್ತೆ. ಹಲವಾರು ರೈತರಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದಂತೆ ಜಾಗದ ಪರಿಹಾರದ ತಾರತಮ್ಯದ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ರೈತರ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಅಧಿಕಾರಿಗಳೊಂದಿಗೆ ಮಾತನಾಡಿಸಿದ ಬಳಿಕ ರೈತರು ಒಪ್ಪಿಗೆ ನೀಡಿದ್ದಾರೆ. ಹಾಗಾಗಿ, ರೈತರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.
ನಮ್ಮ ಜಿಲ್ಲೆಯ ರೈತರು ತಮ್ಮ ಜಾಗವನ್ನ ನೀಡಿದ್ದಾರೆ. ಇದು ಅವರ ದೊಡ್ಡತನ. ನಮ್ಮ ಮಂಡ್ಯ ಹೆಚ್ಚು ಹೆಚ್ಚು ಅಭಿವೃದ್ಧಿಯಾಗಬೇಕು. ಹೀಗಾಗಿ, ನಾನು ಹೆಚ್ಚು ಶ್ರಮವಹಿಸಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಎಂದು ತಿಳಿಸಿದರು.