ಮಂಡ್ಯ: ಹೆಣ್ಣು ಮಗು ಎಂಬ ಕಾರಣಕ್ಕೆ ಹುಟ್ಟಿದ ಕೆಲವೇ ಗಂಟೆಯಲ್ಲಿ ತಾಯಿಯೊಬ್ಬಳು ತನ್ನ ಕರುಳ ಕುಡಿಯನ್ನು ಅನಾಥವಾಗಿಸಿ, ದತ್ತು ಸ್ವೀಕಾರ ಕೇಂದ್ರಕ್ಕೆ ಒಪ್ಪಿಸಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆದಿದೆ. ಮೂಲತಃ ರಾಮನಗರ ಜಿಲ್ಲೆಯ ಮಹಿಳೆಯೊಬ್ಬಳು ಇಂತಹದ್ದೊಂದು ಕಠೋರ ನಿರ್ಧಾರ ಮಾಡಿದ್ದು, ತನ್ನ ಪತಿಯೊಂದಿಗೆ ಸೇರಿ ತಾಯ್ತನದ ಮಮಕಾರ ಮರೆತು, ತಾಯಿ ಅನಾಥ ಮಾಡಿದ್ದಾಳೆ.
ಅಂದಹಾಗೆ ಮಗು ನೀಡಿರುವ ದಂಪತಿ ಐದು ವರ್ಷದ ಹಿಂದೆ ಮದುವೆಯಾಗಿದ್ದರು. ಈಗಾಗಲೇ ಎರಡು ಹೆಣ್ಣು ಮಕ್ಕಳಿದ್ದು, ಮತ್ತೊಂದು ಮಗು ಬೇಡ ಎಂಬ ಕಾರಣಕ್ಕೆ ಆ ಮಹಿಳೆ ಮಕ್ಕಳಾಗದಂತೆ ಶಸ್ತ್ರ ಚಿಕಿತ್ಸೆ ಮಾಡಿಸಿದ್ದರು. ಆದರೂ ಗರ್ಭಿಣಿಯಾಗಿದ್ದು, ಈ ವಿಚಾರ ಗೊತ್ತಾಗುತ್ತಿದ್ದಂತೆ ವೈದ್ಯರನ್ನು ಸಂಪರ್ಕಿಸಿ ಮಗು ತೆಗೆಯುವಂತೆ ಬೇಡಿಕೆ ಇಟ್ಟಿದ್ರು. ಮಗು ತೆಗೆಯಲು ಒಪ್ಪದ ವೈದ್ಯರು ಮನವೊಲಿಸಿ ಕಳುಹಿಸಿದ್ರು.
ಇನ್ನು ಜೂನ್ 3 ರಂದು ಹೆರಿಗೆ ನೋವು ಕಾಣಿಸಿಕೊಂಡಾಗ ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಬಂದು ದಾಖಲಾಗಿದ್ರು. ಮತ್ತೆ ಹೆಣ್ಣು ಮಗುವಾಗಿದ್ದರಿಂದ ತಮ್ಮ ಕೈಯಲ್ಲಿ ಸಾಕಲಾಗುವುದಿಲ್ಲ. ಯಾರಿಗಾದ್ರೂ ಕೊಟ್ಟು ಬಿಡುವಂತೆ ವೈದ್ಯರ ಬಳಿ ಹೇಳಿಕೊಂಡಿದ್ರು. ಈ ವಿಚಾರ ತಿಳಿದ ಸಿಡಿಪಿಒ ಕುಮಾರ್, ಆಸ್ಪತ್ರೆಗೆ ಭೇಟಿ ನೀಡಿ ನಿಯಮಾನುಸಾರ ಸಹಿ ಪಡೆದು ದತ್ತು ಸ್ವೀಕಾರ ಕೇಂದ್ರಕ್ಕೆ ಒಪ್ಪಿಸಿದ್ರು.
ಕೊರೊನಾದಿಂದ ಅದೆಷ್ಟೋ ಮಕ್ಕಳು ತಂದೆ-ತಾಯಿ ಕಳೆದುಕೊಂಡು ಅನಾಥವಾಗಿವೆ. ಆದರೆ ಈ ಹಸುಗೂಸು ಹೆತ್ತವರು ಜೀವಂತವಾಗಿದ್ದರೂ ಅನಾಥವಾಗಿರುವುದು ನೋವಿನ ಸಂಗತಿ.