ಮಂಡ್ಯ: ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಆಕ್ಸಿಜನ್ ಕೊರತೆ ಎದುರಾಗಿದೆ. ರಾಜ್ಯ ಸರ್ಕಾರ ತುರ್ತಾಗಿ ಆಕ್ಸಿಜನ್ ಪೂರೈಸುವುದಕ್ಕೆ ವ್ಯವಸ್ಥೆ ಮಾಡಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಒತ್ತಾಯಿಸಿದರು.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಕೈಗೊಂಡಿರುವ ವ್ಯವಸ್ಥೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಜಿಲ್ಲೆ ಯಲ್ಲಿ ಆಕ್ಸಿಜನ್ ಬೇಡಿಕೆ ತುಂಬಾ ಇದೆ. ಸದ್ಯ ಬೇಡಿಕೆಯಷ್ಟು ಆಕ್ಸಿಜನ್ ಪೂರೈಕೆಯಾಗುತ್ತಿಲ್ಲ. ದಿನವೊಂದಕ್ಕೆ 300 ರಿಂದ 350 ಆಕ್ಸಿಜನ್ ಸಿಲಿಂಡರ್ ಬೇಕಿರುವ ಕಡೆ 100 ಸಿಲಿಂಡರ್ ಮಾತ್ರ ನಮಗೆ ದೊರಕುತ್ತಿದೆ. ಆಕ್ಸಿಜನ್‌ಗೆ ಕೊರೆಯಾಗಿರುವ ಬಗ್ಗೆ ಆರೋಗ್ಯ ಸಚಿವ ಡಾ.ಸುಧಾಕರ್ ಅವರ ಗಮನಕ್ಕೆ ತರಲಾಗಿ ತುರ್ತಾಗಿ 200 ಆಕ್ಸಿಜನ್ ಸಿಲಿಂಡರ್‌ಗಳನ್ನು ಮಂಡ್ಯ ಜಿಲ್ಲೆಗೆ ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ.
ಅಲ್ಲದೇ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೂ ತರಲಾಗಿದ್ದು, ಡಿಸಿ ಮೂಲಕ ಆಕ್ಸಿಜನ್‌ಗೆ ಕೊರತೆಯಾಗದಂತೆ ಏನೆಲ್ಲಾ ವ್ಯವಸ್ಥೆಗಳನ್ನು ಮಾಡಬೇಕೋ ಅದೆಲ್ಲವನ್ನೂ ಮಾಡಿಸುವುದಾಗಿ ತಿಳಿಸಿರುವುದಾಗಿ ಹೇಳಿದರು.
ಆತಂಕ - ಭಯ ಹೆಚ್ಚಳ:
ಕೊರೊನಾ ಸೋಂಕು ನಿವಾರಣೆಗೆ ಸರ್ಕಾರದಿಂದ ಏನೆಲ್ಲಾ ಸೌಲಭ್ಯಗಳು ಅಗತ್ಯವಿದೆ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಮಿಮ್ಸ್ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ 150 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ಸೋಂಕು ವಿಕೋಪದ ಹಂತ ತಲುಪಿರುವುದರಿಂದ ಸಹಜವಾಗಿಯೇ ಜನರಲ್ಲಿ ಆತಂಕ, ಭಯ ಹೆಚ್ಚಾಗಿದೆ. ಇದ ರಿಂದಾಗಿಯೂ ಸಾವುಗಳು ಹೆಚ್ಚು ಸಂಭವಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಜನರಲ್ಲಿರುವ ಆತಂಕ, ಭಯವನ್ನು ನಿವಾರಿಸಿ ಅವರಲ್ಲಿ ಆತ್ಮಸ್ಥೆರ್ಯ ತುಂಬುವುದರೊಂದಿಗೆ ಸೋಂಕು ಸಮರ್ಥವಾಗಿ ಎದುರಿಸಬೇಕಿದೆ. ಜನರ ಪ್ರಾಣ ರಕ್ಷಣೆ ನಮ್ಮೆಲ್ಲರ ಮುಖ್ಯ ಧ್ಯೇಯ ವಾಗಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು, ವೈದ್ಯರು ಶ್ರಮ ವಹಿಸುತ್ತಿದ್ದಾರೆ. ಅವರೊಂದಿಗೆ ಜನರು ಸಹನೆಯಿಂದ ವರ್ತಿಸಬೇಕಿದೆ ಎಂದರು.
ಜಿಲ್ಲಾಸ್ಪತ್ರೆಗೆ ಭೇಟಿ:
ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ನಗರದ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಕ್ಸಿಜನ್ ಬೆಡ್‌ಗಳಿಗೆ ಮಾಡಿರುವ ವ್ಯವಸ್ಥೆ, ವೆಂಟಿಲೇಟರ್ ಬೆಡ್‌ಗಳ ಸ್ಥಿತಿ, ಹೆಚ್ಚುವರಿ ವೆಂಟಿಲೇಟರ್ ಅಳವಡಿಸುವುದಕ್ಕೆ ನಡೆಸುತ್ತಿರುವ ಸಿದ್ಧತೆಗಳ ಬಗ್ಗೆ ವೀಕ್ಷಣೆ ನಡೆಸಿ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಸೋಂಕಿತರಿಗೆ ಎಲ್ಲ ರೀತಿಯ ಸೌಕರ್ಯಗಳು ದೊರಕಬೇಕು. ಆಕ್ಸಿಜನ್‌ಗೆ ಕೊರತೆಯಾಗದಂತೆ ಎಚ್ಚರ ವಹಿಸಬೇಕು. ಆಕ್ಸಿಜನ್ ಬೇಡಿಕೆ ಹೆಚ್ಚಿರುವುದು ನನ್ನ ಗಮನಕ್ಕೂ ಬಂದಿದ್ದು, ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯಲಾಗಿದೆ. ಶೀಘ್ರ ಆಕ್ಸಿಜನ್ ದೊರಕುವ ಸಾಧ್ಯತೆಗಳಿವೆ ಎಂದರು.