ಮಂಡ್ಯ : ನಮ್ಮ ಸರ್ಕಾರಕ್ಕೆ ದೊಡ್ಡ ಮಟ್ಟದ ಅನ್ಯಾಯವಾಗುತ್ತಿದೆ. ಲೂಟಿ ಮಾಡುವ ಕೆಲಸ ಬಿಟ್ಟು ಮೊದಲು ರಾಜಧನ ಕಟ್ಟಲಿ ಎಂದು ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಪ್ರತಿಕ್ರಿಯೆ ನೀಡಿದರು.
ಮಂಡ್ಯದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದೇಪದೆ ಭಾರಿ ಶಬ್ಧ ಕೇಳಿ ಬರುತ್ತಿದೆ. ನಮ್ಮ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಎಲ್ಲಿಂದ ಶಬ್ಧ ಬರ್ತಿದೆ ಎಂದು ಗೊತ್ತಾಗುತ್ತಿಲ್ಲ ಎಂದರು. ಪಾಂಡವಪುರ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ಭಾಗದಲ್ಲಿ ಭಾರಿ ಶಬ್ಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬೆಚ್ಚಿ ಬೀಳುವಂತಹ ಶಬ್ಧ ಕೇಳಿ ಬರುತ್ತಿದೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ ಎಂದರು.
ಕೆಆರ್ಎಸ್ ಡ್ಯಾಂಗೆ ತೊಂದರೆ ಇಲ್ಲ : ಸದ್ಯ ಕೆಆರ್ಎಸ್ ಡ್ಯಾಂಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಯಾವುದೇ ಕಾರಣಕ್ಕೂ ಬೇಬಿಬೆಟ್ಟ ಸುತ್ತಮುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ ಬೇಡ. ಅಲ್ಲಿರುವಂತವರಿಗೆ ಬೇರೆ ಕಡೆ ಸ್ಥಳಾಂತರ ಮಾಡಿ ಅವಕಾಶ ನೀಡಲಾಗುತ್ತದೆ. ಅಭಿವೃದ್ಧಿಗೆ ಜೆಲ್ಲಿ ಕಲ್ಲು ಅವಶ್ಯಕ. ಹಾಗಾಗಿ, ಸಕ್ರಮವಾಗಿ ಗಣಿಗಾರಿಕೆ ನಡೆಸಲಿ. ಅಕ್ರಮವಾಗಿ ಬೇಡ ಎಂದು ತಿಳಿಸಿದರು.
ರಾಜಧನ ಕಟ್ಟಿದರೆ ಗಣಿಗಾರಿಕೆಗೆ ಅನುಮತಿ : ಲೂಟಿ ಮಾಡುವ ಕೆಲಸ ಬಿಟ್ಟು ಮೊದಲು ರಾಜಧನ ಕಟ್ಟಲಿ. ನೂರು ಲಾರಿ ಜೆಲ್ಲಿ ಹೊಡೆದರೆ ಎರಡೂ ಲಾರಿಗೂ ರಾಯಲ್ಟಿ ಕಟ್ಟುತ್ತಿಲ್ಲ. ನಮ್ಮ ಸರ್ಕಾರಕ್ಕೆ ದೊಡ್ಡ ಮಟ್ಟದ ಅನ್ಯಾಯ ಮಾಡಲಾಗ್ತಿದೆ. ರಸ್ತೆಗಳು ಹಾಳಾಗುತ್ತಿವೆ. ಇದನ್ನ ನಾವು ತಡೆಯಬೇಕು. ರಾಯಲ್ಟಿ ಕಟ್ಟಿದರೆ, ಸಕ್ರಮ ಮಾಡಲಾಗುತ್ತದೆ ಎಂದು ಹೇಳಿದರು.
ರಾತ್ರಿ ವೇಳೆ ಕಳ್ಳತನ : ಸಾವಿರಾರು ಕೋಟಿ ರಾಜಧನ ಬಂದರೆ ಜಿಲ್ಲೆ ಅಭಿವೃದ್ಧಿಯಾಗುತ್ತದೆ. ಹಗಲಿನಲ್ಲಿ ಯಾರು ಜಲ್ಲಿ ಹೊಡೆಯುವುದಿಲ್ಲ. ರಾತ್ರಿ ವೇಳೆ ಜಲ್ಲಿ ಹೊಡೆಯುತ್ತಾ ಕಳ್ಳತನ ಮಾಡುತ್ತಿದ್ದಾರೆ ಎಂದು ಗಣಿಗಾರಿಕೆ ಮಾಲೀಕರ ವಿರುದ್ಧ ಕಿಡಿಕಾರಿದರು.
ರವೀಂದ್ರ ಶ್ರೀಕಂಠಯ್ಯ ರಾಜಕೀಯ ಕಿತಾಪತಿ : ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಎಂಬ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಮ್ಮ ಜಿಲ್ಲೆಯಲ್ಲಿ ಹೈಟೆಕ್ ವಿಶ್ವೇಶ್ವರಯ್ಯ ಕ್ರೀಡಾಂಗಣ ಆಗಬೇಕು. ನಾನು ಕ್ರೀಡಾ ಮಂತ್ರಿಯಾಗಿದ್ದ ವೇಳೆ ಕೆ ಆರ್ ಪೇಟೆ ಕ್ರೀಡಾಂಗಣದಲ್ಲಿ ಯಾವುದೇ ಸೌಲಭ್ಯವಿರಲಿಲ್ಲ.
ಎಲ್ಲಾ ತಾಲೂಕಿನಲ್ಲಿ ಅಭಿವೃದ್ಧಿಯಾಗಿದೆ. ಕೆಆರ್ ಪೇಟೆ ಹಿಂದುಳಿದಿದೆ. ಅದಕ್ಕೆ ಹೆಚ್ಚಿನ ಅನುದಾನ ಹಾಕಿದ್ದೇನೆ. ಈಗ ಎಲ್ಲ ತಾಲೂಕು ಕ್ರೀಡಾಂಗಣ ಅಭಿವೃದ್ಧಿ ಮಾಡುತ್ತೇನೆ. ಅವರು ಏನೇ ಆರೋಪ ಮಾಡಿದರೂ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಗೆ ನಮ್ಮ ಸರ್ಕಾರ ಸಹಕರಿಸುತ್ತಿದೆ. ಸುಮ್ಮನೆ ರಾಜಕಾರಣದ ಕಿತಾಪತಿ ಮಾಡೋದು ಬೇಡ ಎಂದರು.
ಕೋವಿಡ್ 3ನೇ ಅಲೆ ಬಾರದಿರಲೆಂದು ಭಗವಂತನಲ್ಲಿ ಪ್ರಾರ್ಥಿಸುವೆ : ಕೊರೊನಾ 3ನೇ ಅಲೆಗೆ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಎಲ್ಲಾ ರೀತಿಯ ಸಿದ್ಧತೆಯನ್ನ ಮಾಡಿಕೊಳ್ಳಲಾಗುತ್ತಿದೆ. ಇನ್ನು, 2ನೇ ಅಲೆ ಹೋಗಿಲ್ಲ. ಆದ್ರೆ, 3ನೇ ಅಲೆ ಯಾವುದೇ ಕಾರಣಕ್ಕೂ ಬರಬಾರದೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ : ನಮ್ಮ ಸಿಎಂ ಬಸವರಾಜು ಬೊಮ್ಮಾಯಿ ಹೇಳಿರುವ ಪ್ರಕಾರ, ಇನ್ನೂ ಎರಡನೇ ಅಲೆ ಹೋಗಿಲ್ಲ. 60 ದಿನವಾದರೂ ಕೂಡ ಚಿಕಿತ್ಸೆ ಪಡೆಯುತ್ತಿರುವವರು ಇದ್ದಾರೆ. 2ನೇ ಅಲೆ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದವರು ಈಗ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಯಾರೂ ಕೂಡ ಕೊರೊನಾ ಬಗ್ಗೆ ನಿರ್ಲಕ್ಷ್ಯ ತೋರಬೇಡಿ ಎಂದು ಮನವಿ ಮಾಡಿದರು.
ರೋಗ ಲಕ್ಷಣಗಳು ಕಂಡು ಬಂದರೆ ಟೆಸ್ಟ್ ಮಾಡಿಸಿ : ರೋಗ ಲಕ್ಷಣಗಳು ಕಂಡು ಬಂದರೆ ಟೆಸ್ಟ್ ಮಾಡಿಸಿ. ಕ್ವಾರಂಟೈನ್ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆಯಿರಿ. ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಯಾರೂ ಕೂಡ ನಿರ್ಲಕ್ಷ್ಯ ತೋರದೆ ಎಚ್ಚರಿಕೆವಹಿಸಿ ಹಾಗೂ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಿ ಎಂದು ಸಚಿವ ನಾರಾಯಣಗೌಡ ಸಲಹೆ ಮಾಡಿದರು.